ವೆಲ್ಲಿಂಗ್ಟನ್ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬುದು ಹಣ ಮತ್ತು ಕ್ರಿಕೆಟ್‌ನ ಸಮ್ಮಿಶ್ರಣ. ಉತ್ತಮ ತಂಡವನ್ನು ರಚಿಸಿ ಕಪ್ ಗೆಲ್ಲುವುದಕ್ಕಾಗಿ ಫ್ರಾಂಚೈಸಿಗಳು ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ಪ್ರದರ್ಶನ ಚೆನ್ನಾಗಿದ್ದರೆ ನಾನಾ ಮೂಲಗಳಿಂದ ದುಪ್ಪಟ್ಟು ಹಣ ಗಳಿಸುತ್ತವೆ. ಪರಿಸ್ಥಿತಿ ಹೀಗಿರುವಾಗ ದೊಡ್ಡ ಗಾತ್ರದ ಹಣದ ಥೈಲಿ ನೀಡಿ ಖರೀದಿ ಮಾಡಿದ ಕ್ರಿಕೆಟಿಗರೊಬ್ಬರು ಸರಿಯಾಗಿ ಆಡದಿದ್ದರೆ ಮಾಲೀಕರಿಗೆ ಕೋಪ ಬರುವುದು ಸಹಜ. ಆದರೆ, ಕಪಾಳಕ್ಕೆ ಹೊಡೆಯುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ, ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ರಾಸ್ ಟೇಲರ್, ಹೌದು ಸೊನ್ನೆಗೆ ಔಟಾಗಿದ್ದಕ್ಕೆ ಮಾಲೀಕರಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.
ನ್ಯೂಜಿಲೆಂಡ್ ತಂಡಕ್ಕೆ ಇತ್ತೀಚೆಗೆ ನಿವೃತ್ತಿ ಹೇಳಿರುವ ರಾಸ್ ಟೇಲರ್ ತಮ್ಮ ಆತ್ಮಕತೆ “ಬ್ಲ್ಯಾಕ್ ಆಂಡ್ ವೈಟ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ವೃತ್ತಿ ಕ್ರಿಕೆಟ್‌ನ ನೋವು, ನಲಿವುಗಳ ಸಂದರ್ಭಗಳನ್ನು ಬರೆದುಕೊಂಡಿದ್ದಾರೆ. ಅದರಲ್ಲೊಂದು ಅವರು ಐಪಿಎಲ್‌ಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿರುವ ಘಟನೆ.
ಯಾವಾಗ ನಡೆದಿತ್ತು ಕಹಿ ಘಟನೆ
ರಾಸ್ ಟೇಲರ್ ಅವರು ೨೦೧೧ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡಿದ್ದರು. ಅದಕ್ಕಿಂತ ಮೊದಲು ರಾಯಲ್ ಚಾಲೆಂಜರ್ಸ್ ತಂಡದ ಸದಸ್ಯರಾಗಿದ್ದರು. ಅವರು ಆ ವರ್ಷ ೪.೬ ಕೋಟಿ ರೂಪಾಯಿಗೆ ರಾಜಸ್ಥಾನ್ ಪಾಲಾಗಿದ್ದರು. ಅದರೆ, ೧೨ ಪಂದ್ಯಗಳಲ್ಲಿ ೧೮೧ ರನ್‌ಗಳನ್ನು ಕಲೆ ಹಾಕಿದ್ದರು. ಇದು ಮಾಲೀಕರಿಗೆ ಸಹಜವಾಗಿ ಕೋಪ ತರಿಸಿರಬಹುದು.
ಆ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಸ್ ಟೇಲರ್ ಶೂನ್ಯಕ್ಕೆ ಔಟಾಗಿದ್ದರು. ನಿರಾಸೆಯಿಂದ ಡ್ರೆಸಿಂಗ್ ರೂಮ್‌ಗೆ ಹೋದಾಗ ಅಲ್ಲಿ ಎದುರಾದ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರು ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿ, “ಕೋಟಿ ಗಟ್ಟಲೆ ಹಣ ಪಡೆದುಕೊಂಡು ಶೂನ್ಯಕ್ಕೆ ಔಟಾಗಿ ಬಂದರೆ ಹೇಗೆ,’ ಎಂದು ಪ್ರಶ್ನಿಸಿದ್ದರಂತೆ. ಈ ಬಗ್ಗೆ ಟೇಲರ್ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ,ಪೆಟ್ಟು ಕೊಟ್ಟ ಮಾಲೀಕರ ಬಗ್ಗೆ ವಿವರ ತಿಳಿಸಿಲ್ಲ.
ನನಗೆ ರಾಜಸ್ಥಾನ್ ತಂಡದ ಮಾಲೀಕರು ಜೋರಾಗಿ ಹೊಡೆದಿರಲಿಲ್ಲ. ಆದರೆ, ವೃತ್ತಿಪರ ವ್ಯವಸ್ಥೆಯಲ್ಲಿ ಈ ರೀತಿ ಇರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಹೀಗಾಗಿ ಆಘಾತಕ್ಕೆ ಒಳಗಾದೆ ಎಂದು ಹೇಳಿಕೊಂಡಿದ್ದಾರೆ.
ರಾಸ್ ಟೇಲರ್ ಅವರು ತಮ್ಮ ಪುಸ್ತಕದಲ್ಲಿ ತಾವು ನ್ಯೂಜಿಲೆಂಡ್ ತಂಡಕ್ಕೆ ಸೇರ್ಪಡೆಗೊಂಡ ಆರಂಭಿಕ ದಿನಗಳಲ್ಲಿ ಡ್ರೆಸಿಂಗ್ ರೂಮ್‌ನಲ್ಲಿ ಎದುರಿಸುತ್ತಿದ್ದ ಜನಾಂಗೀಯ ನಿಂದೆಗಳನ್ನೂ ಬಹಿರಂಗ ಮಾಡಿದ್ದಾರೆ.
ಇದನ್ನೂ ಓದಿ | Women’s IPL : ಮಹಿಳೆಯರ ಐಪಿಎಲ್‌ಗಾಗಿ ದೇಶಿ ಟೂರ್ನಿಗಳು ಬೇಗ ಮುಗಿಸಲಿದೆ ಬಿಸಿಸಿಐ