Site icon Vistara News

Wimbeldon : ಜೊಕೊವಿಕ್‌ಗೆ 21ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ

wimbeldon

ಲಂಡನ್‌: ಟೂರ್ನಿಯ (Wimbeldon) ಅಗ್ರ ಶ್ರೇಯಾಂಕದ ಟೆನಿಸ್‌ ಅಟಗಾರ ನೊವಾಕ್‌ ಜೊಕೊವಿಕ್‌ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ನಿಕ್‌ ಕಿರ್ಗಿಯೋಸ್‌ ವಿರುದ್ಧ ರೋಚಕ ಗೆಲುವು ದಾಖಲಿಸಿದರು. ಈ ಮೂಲಕ ಅವರು 7ನೇ ವಿಂಬಲ್ಡನ್‌ ಕಿರೀಟ ಹಾಗೂ ಒಟ್ಟಾರೆ 21ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದುಕೊಂಡರು.

ಆಲ್‌ ಇಂಗ್ಲೆಂಡ್‌ನ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಪಂದ್ಯದ ಆರಂಭಿಕ ಸೆಟ್‌ನಲ್ಲಿ 4-6 ಸೆಟ್‌ಗಳಿಂದ ಹಿನ್ನಡೆ ಅನುಭವಿಸಿದ ನೊವಾಕ್‌, ನಂತರದ ಎರಡು ಸೆಟ್‌ಗಳನ್ನು 6-3, 6-4 ಅಂತರದಲ್ಲಿ ಗೆದ್ದು ಪ್ರಶಸ್ತಿಗೆ ಕೋರ್ಟ್‌ನ ಹುಲ್ಲು ತಿಂದು ಸಂಭ್ರಮಿಸಿದರು. ಇದು ಅವರಿಗೆ ಸತತ ನಾಲ್ಕನೇ wimbeldon ಟ್ರೋಫಿ.

4ನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಉಭಯ ಆಟಗಾರರಿಂದ 5-5, 6-6ರಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಅಂತಿಮವಾಗಿ ಟೈ ಬ್ರೇಕರ್‌ನಲ್ಲಿ 7-6 (7/3)ರಲ್ಲಿ ವಿಶ್ವದ 3ನೇ ರ್ಯಾಂಕ್‌ನ ನೊವಾಕ್‌ ಜಯ ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ ಸರ್ಬಿಯಾದ ಆಟಗಾರ ಜೊಕೊವಿಕ್‌, 7 ಅಥವಾ ಇದಕ್ಕಿಂತ ಹೆಚ್ಚು ಬಾರಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದ ಸ್ವಿಜರ್ಲೆಂಡ್‌ನ ರೋಜರ್‌ ಫೆಡರರ್‌ (8) ಮತ್ತು ಅಮೆರಿಕದ ಪೀಟ್‌ ಸಾಂಪ್ರಾಸ್‌ (7) ಸಾಲಿಗೆ ಸೇರ್ಪಡೆಯಾದರು.

ಕಿರ್ಗಿಯೋಸ್‌ ಕನಸು ಭಗ್ನ: ಮತ್ತೊಂದೆಡೆ ಆರಂಭಿಕ ಸೆಟ್‌ ಗೆದ್ದು ಶುಭಾರಂಭ ಮಾಡಿದ ಕಿರ್ಗಿಯೋಸ್‌, ಅದೇ ಸ್ಥಿರ ಆಟವನ್ನು ಕಾಯ್ದುಕೊಳ್ಳಲು ವಿಫಲರಾದರು. ಹೀಗಾಗಿ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಗೆಲ್ಲುವ ಸುಮಾರು 9 ವರ್ಷಗಳ ಅವರ ಕನಸು ಈಡೇರಿಲ್ಲ. ನಿಕ್‌, ಪಂದ್ಯದಲ್ಲಿ ಒಟ್ಟು 30 ಏಸ್‌ ಸಿಡಿಸಿದರೆ, ಜೊಕೊವಿಕ್‌ 15ರಲ್ಲಿ ಮಾತ್ರ ಯಶ ಕಂಡರು.

ಇದನ್ನೂ ಓದಿ: Wimbeldon ಟ್ರೋಫಿಗೆ ಮುತ್ತಿಟ್ಟ ಕಜಕಸ್ತಾನದ 23 ತರುಣಿ

Exit mobile version