Site icon Vistara News

wimbeldon 2022 | ಪ್ರಶಸ್ತಿ ಮೇಲೆ ಹಲವರ ಕಣ್ಣು; ಜೊಕೊವಿಕ್‌, ಇಗಾ ಅಲ್ದೆ ಇನ್ಯಾರೆಲ್ಲ ಫೇವರಿಟ್‌?

wimbeldon

ಲಂಡನ್‌: ವರ್ಷದ ಮೂರನೇ ಗ್ರ್ಯಾನ್‌ ಸ್ಲಾಮ್‌ ವಿಂಬಲ್ಡನ್‌ ಸೋಮವಾರ (ಜೂನ್‌ ೨೭) ಆರಂಭವಾಗಲಿದ್ದು, ಉಕ್ರೇನ್‌ ಮೇಲಿನ ದಾಳಿಗೆ ಖಂಡಿಸಿ ರಷ್ಯಾದ ಆಟಗಾರರಿಗೆ ಆಯೋಜಕರು ನಿಷೇಧ ಹೇರಿರುವ ಕಾರಣ ಪ್ರತಿಷ್ಠಿತ ಟೂರ್ನಿ ಕಳೆಗುಂದಲಿದೆ ಎಂದು ಟೆನಿಸ್‌ ಕ್ಷೇತ್ರದ ಪಂಡಿತರು ಆಭಿಪ್ರಾಯಪಟ್ಟಿದ್ದಾರೆ. ಅದಾಗ್ಯೂ ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಪ್ರಶಸ್ತಿ ಫೇವರಿಟ್‌ ಆಗಿದ್ದು, ಇನ್ನೂ ಹಲವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ಮೂರನೇ ರ‍್ಯಾಂಕ್‌ನ ಆಟಗಾರ ನೊವಾಕ್‌ ಜೊಕೊವಿಕ್ ಹಾಗೂ ನಾಲ್ಕನೇ ರ‍್ಯಾಂಕ್‌ನ ರಾಫೆಲ್‌ ನಡಾಲ್‌ ನಡುವೆ ಪ್ರಶಸ್ತಿಗಾಗಿ ನೇರ ಫೈಟ್‌ ನಡೆಯಲಿದೆ. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಅವರು ೭ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಇಟಲಿಯ ಮ್ಯಾಟಿಯೊ ಬೆರೆಟಿನಿ ವಿರುದ್ಧ ಜಯ ಸಾಧಿಸಿ ಟ್ರೋಫಿ ಗೆದ್ದಿದ್ದರು.

೨೦ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಜೊಕೊವಿಕ್‌ ಅಥವಾ ದಾಖಲೆಯ ೨೨ ಪ್ರಶಸ್ತಿಗಳ ವೀರ ರಾಫೆಲ್‌ ನಡಾಲ್‌ ಪ್ರಶಸ್ತಿ ಗೆಲ್ಲಲು ವಿಫಲಗೊಂಡರೆ ಇಟಲಿಯ ಮ್ಯಾಟಿಯೊ ಬೆರೆಟಿನಿ ಅವಕಾಶ ಬಾಚಿಕೊಳ್ಳಬಹುದು. ಇತ್ತೀಚಿನ ಹುಲ್ಲಿನಂಗಣದ ಎರಡು ಸ್ಪರ್ಧೆಯಲ್ಲಿ (ಸ್ಟಟ್‌ಗರ್ಟ್‌ ಹಾಗೂ ಕ್ವೀನ್ಸ್‌ ಕ್ಲಬ್‌) ಅವರು ಪ್ರಶಸ್ತಿ ಗೆದ್ದುಕೊಂಡು ವಿಂಬಲ್ಡನ್‌ಗೆ ಬಂದಿದ್ದಾರೆ. ಗಾಯಗೊಂಡು ಫೀಲ್ಡ್‌ಗೆ ಮರಳಿದ ಬಳಿಕ ಹಿಂದಿನ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಸ್ಥಳೀಯ ಫೇವರಿಟ್‌ ಆಂಡಿ ಮರ್ರಿ ಕೂಡ ಈ ಬಾರಿಯ ಪ್ರಮುಖ ಆಕರ್ಷಣೆ.

ಇನ್ನೂ ಸುಧಾರಿಸಿಲ್ಲ ಫೆಡರರ್‌

ಎಂಟು ಬಾರಿಯ ಚಾಂಪಿಯನ್‌ ಸ್ವಿಜರ್ಲೆಂಡ್‌ನ ರೋಜರ್‌ ಫೆಡರರ್‌ ಅವರು ೧೨ ತಿಂಗಳ ಹಿಂದೆ ಆಗಿರುವ ಗಾಯದ ಸಮಸ್ಯೆಯಿಂದ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಪದಾರ್ಪಣೆ ನಂತರದ ೨೩ ವರ್ಷಗಳ ಬಳಿಕ ಮೊದಲ ಬಾರಿ ಟೂರ್ನಿಗೆ ಅಲಭ್ಯರಾಗುತ್ತಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಜಿ ನಂಬರ್‌ ಒನ್‌ ಜಪಾನ್‌ ಆಟಗಾರ್ತಿ ನವೋಮಿ ಒಸಾಕ ಅವರೂ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ.

ಇಗಾ ಫೆವರಿಟ್‌

ಮಹಿಳೆಯರ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ. ಹಿಂದಿನ ಫ್ರೆಂಚ್‌ ಒಪನ್‌ನಲ್ಲೂ ಅವರು ಚಾಂಪಿಯನ್‌ ಆಗಿದ್ದರು. ಅಲ್ಲದೆ ಇತ್ತೀಚಿನ ಕೆಲವು ಟೂರ್ನಿಗಳಲ್ಲಿ ನಿರಂತರ ಜಯ ದಾಖಲಿಸಿಕೊಂಡು ಬರುತ್ತಿರುವ ಅವರು ತಮ್ಮ ಜಯದ ಅಭಿಯಾನ ಮುಂದುವರಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ ವೃತ್ತಿ ಟೆನಿಸ್‌ಗೆ ವಿದಾಯ ಹೇಳಿರುವ ಬಳಿಕ ಡಬ್ಲ್ಯುಟಿಎ ನಂಬರ್‌ ಒನ್‌ ಸ್ಥಾನ ಗಳಿಸಿರುವ ಅವರು ಅದೇ ಲಯ ಮುಂದುವರಿಸುವ ಸಾಧ್ಯತೆಗಳಿವೆ.

ಮತ್ತೆ ಬಂದರು ಸೆರೆನಾ

23 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಹಾಲಿ ವಿಂಬಲ್ಡನ್‌ನ ಪ್ರಧಾನ ಆಕರ್ಷಣೆ ಎನಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಕಳೆದ ೧೨ ತಿಂಗಳಿಂದ ಟೆನಿಸ್ ಅಂಕಣದಿಂದ ದೂರ ಉಳಿದಿದ್ದರು. ಹೀಗಾಗಿ ೧೨೦೪ ರ‍್ಯಾಂಕ್‌ಗೆ ಕುಸಿದಿರುವ ಅವರು ಮತ್ತೆ ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬ್ಯಾನ್‌ ಎಫೆಕ್ಟ್‌

ಪುರುಷರ ವಿಭಾಗದಲ್ಲಿ ಎಟಿಪಿ ರ‍್ಯಾಂಕ್‌ ಪಟ್ಟಿಯಲ್ಲ ಅಗ್ರಸ್ಥಾನ ಪಡೆದಿರುವ ಡ್ಯಾನಿಲ್‌ ಮೆಡ್ವೆಡೆವ್‌ ರಷ್ಯಾದವರಾಗಿರುವ ಕಾರಣ ಅವರಿಗೆ ಟೂರ್ನಿಗೆ ಪ್ರವೇಶ ಇಲ್ಲ. ಅಂತೆಯೇ ಎರಡನೇ ರ‍್ಯಾಂಕ್‌ನ ಜರ್ಮನಿಯ ಆಟಗಾರ ಅಲೆಕ್ಸಾಂಡರ್‌ ಜ್ವರೇವ್ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದಾರೆ. ಹೀಗಾಗಿ ಮೂರನೇ ರ‍್ಯಾಂಕ್ ಹಾಗೂ ಟೂರ್ನಿಯ ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಗೆಲುವಿನ ಫೇವರಿಟ್‌ ಎನಿಸಿಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರಿಗೂ ನಿಷೇಧ ಅನ್ವಯವಾಗಿದೆ. ಅವರು ಕಳೆದ ಆವೃತ್ತಿಯ ವಿಂಬಲ್ಡನ್‌ನ ಸೆಮಿಫೈನಲ್‌ಗೇರಿದವರು. ಅಂತೆಯೇ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ್ದ ಡೇರಿಯಾ ಕಸಟ್ಕಿನಾ ರಷ್ಯಾದವರು. ಹೀಗಾಗಿ ಪ್ರಮುಖ ಸ್ಪರ್ಧಿಯೊಬ್ಬರು ಟೂರ್ನಿಗೆ ಅಲಭ್ಯರಾಗಿದ್ದಾರೆ. ಅದೇ ರೀತಿ ವಿಶ್ವದ ೨೦ನೇ ರ‍್ಯಾಂಕ್‌ನ ವಿಕ್ಟೋರಿಯಾ ಅಜರೆಂಕಾ ಕೂಡ ರಷ್ಯಾದವರಾಗಿರುವ ಕಾರಣ ಅವರಿಗೂ ಪ್ರವೇಶವಿಲ್ಲ.

ಇದನ್ನೂ ಓದಿ: ಕ್ರಿಕೆಟಿಗ ವಿಲ್ಲಿಯರ್ಸ್‌ & ಟೆನಿಸ್‌ ತಾರೆ ಆಶ್ಲೇ ಈಗ ಗಾಲ್ಫ್‌ ಜೋಡಿ !

Exit mobile version