Site icon Vistara News

Wimbledon 2023: ಗ್ರ್ಯಾನ್‌ ಸ್ಲಾಂ ಸರದಾರ ಜೊಕೋವಿಕ್‌ ಮಣಿಸಿ ವಿಂಬಲ್ಡನ್ ಗೆದ್ದ ಬಿಸಿರಕ್ತದ ತರುಣ ಅಲ್ಕರಾಜ್‌

carlos alcaraz garfia

ಲಂಡನ್​: “ಬ್ಯಾಟಲ್‌ ಆಫ್ ಜನರೇಶನ್‌” ಎಂದೇ ವಿಶ್ಲೇಷಿಸಲ್ಪಟ್ಟ ವಿಂಬಲ್ಡನ್​ 2023ರ ಫೈನಲ್​ ಪಂದ್ಯದಲ್ಲಿ ಸರ್ಬಿಯಾದ ಸ್ಟಾರ್​ ಆಟಗಾರ, 4 ಬಾರಿಯ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌(Novak Djokovic)ಗೆ ವಿಶ್ವದ ನಂ.1 ಆಟಗಾರ ಸ್ಪೇನ್​ನ ಕಾರ್ಲೊಸ್​ ಅಲ್ಕರಾಜ್‌(Carlos Alcaraz) ಸೋಲಿನ ಆಘಾತವಿಕ್ಕಿದ್ದಾರೆ. ಭವಿಷ್ಯದ ಸೂಪರ್‌ ಸ್ಟಾರ್‌ ಎಂದೇ ಕರೆಸಿಕೊಳ್ಳುತ್ತಿರುವ ಸ್ಪೇನ್‌ನ 20 ವರ್ಷದ ಅಲ್ಕರಾಜ್‌ ಚೊಚ್ಚಲ ವಿಂಬಲ್ಡನ್‌ ಹಾಗೂ 2ನೇ ಗ್ರ್ಯಾನ್‌ ಸ್ಲಾಂ ಗೆದ್ದ ಸಾಧನೆ ಮಾಡಿದರು. ಸೋಲು ಕಂಡ ಜೋಕೊ ಸತತ 5ನೇ, ಒಟ್ಟಾರೆ 8ನೇ ವಿಂಬಲ್ಡನ್​ ಕಿರೀಟ, ಹಾಲಿ ವರ್ಷದ ಸತತ 3ನೇ ಗ್ರ್ಯಾನ್‌ ಸ್ಲಾಂ ಮತ್ತು ಒಟ್ಟಾರೆ 24ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಕನಸು ನುಚ್ಚುನೂರಾಯಿತು.

ಭಾನುವಾರ ಇಲ್ಲಿ ನಡೆದ ಅತ್ಯಂತ ಜಿದ್ದಾಜಿದ್ದಿನ 5 ಸೆಟ್​ಗಳ ಮ್ಯಾರಥಾನ್​ ಹೋರಾಟದ ಫೈನಲ್​ನಲ್ಲಿ 36 ವರ್ಷದ ಅನುಭವಿ ನೊವಾಕ್‌ ಜೊಕೋವಿಕ್‌ ಅವರಿಗೆ 20 ವರ್ಷದ ಬಿಸಿರಕ್ತದ ತರುಣ ಅಲ್ಕರಾಜ್‌ 1-6 7-6(8-6) 6-1 3-6 6-4 ಅಂತರದಿಂದ ಹಿಮ್ಮೆಟಿಸಿದರು. ಇದು ಜೊಕೋವಿಕ್‌ ಮತ್ತು ಅಲ್ಕರಾಜ್‌ ನಡುವಿನ ಕೇವಲ 3ನೇ ಮುಖಾಮುಖಿಯಾಗಿತ್ತು. ಗ್ರ್ಯಾನ್‌ಸ್ಲಾಮ್‌ನಲ್ಲಿ ಉಭಯ ಆಟಗಾರ 2ನೇ ಮುಖಾಮುಖಿ ಇದಾಗಿದೆ. ಫೈನಲ್​ನಲ್ಲಿ ಎದುರಾಗಿದ್ದು ಇದೇ ಮೊದಲು. ಇದೇ ವರ್ಷದ ಫ್ರೆಂಚ್‌ ಓಪನ್‌ ಸೆಮಿಫೈನಲ್‌ನಲ್ಲಿ ಇವರಿಬ್ಬರು ಎದುರಾದ ವೇಳೆ ಜೊಕೋವಿಕ್‌ ಗೆದ್ದು ಬಂದಿದ್ದರು. ಕಳೆದ ವರ್ಷ ಮ್ಯಾಡ್ರಿಡ್‌ ಮಾಸ್ಟರ್ ಸೆಮಿಫೈನಲ್‌ನಲ್ಲಿ ಅಲ್ಕರಾಜ್‌ ಜಯ ಸಾಧಿಸಿದ್ದರು. ಫ್ರೆಂಚ್‌ ಓಪನ್‌ ಸೆಮಿಫೈನಲ್‌ ಸೋಲಿನ ಸೇಡನ್ನು ಅಲ್ಕರಾಜ್‌ ವಿಂಬಲ್ಡನ್ ಫೈನಲ್​ನಲ್ಲಿ ತೀರಿಸಿಕೊಂಡರು.

ಇದನ್ನೂ ಓದಿ Wimbledon 2023 : ವಿಂಬಲ್ಡನ್​ ಮಹಿಳೆಯರ ಸಿಂಗಲ್ಸ್​ನಲ್ಲಿ ಅಚ್ಚರಿಯ ಫಲಿತಾಂಶ!

ಜೋಕೊ ದಾಖಲೆಗೆ ಬ್ರೇಕ್​ ಹಾಕಿದ ಅಲ್ಕರಾಜ್‌

ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗುವ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು (23 ಬಾರಿ) ಗ್ರ್ಯಾನ್‌ಸ್ಲಾಂ ಗೆದ್ದ ದಾಖಲೆ ಬರೆದಿದ್ದ ಜೋಕೋ, ವಿಂಬಲ್ಡನ್ ಟೂರ್ನಿಯಲ್ಲಿಯೂ ಗೆದ್ದು ಒಟ್ಟಾರೆ ಸಿಂಗಲ್ಸ್‌ನಲ್ಲಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮಾರ್ಗರೇಟ್‌ ಕೋರ್ಟ್‌(24) ಅವರ ದಾಖಲೆ ಸರಿಗಟ್ಟುವ ಯೋಜನೆಯಲ್ಲಿದ್ದರು. ಜತೆಗೆ 8 ಬಾರಿ ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಟ್ರೋಫಿ ಗೆದ್ದ ಮಾಜಿ ಆಟಗಾರ ರೋಜರ್‌ ಫೆಡರರ್‌ ದಾಖಲೆಯನ್ನು ಸರಿಗಟ್ಟುವ ವಿಶ್ವಾಸದಲ್ಲಿದ್ದರು. ಆದರೆ ಇದಕ್ಕೆ ಅಲ್ಕರಾಜ್‌ ಬ್ರೇಕ್​ ಹಾಕಿದರು.

Exit mobile version