ಲಂಡನ್: ದಾಖಲೆಯ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೊವಾಕ್ ಜೊಕೋವಿಕ್ (Novak Djokovic)ಅವರು 2023ರ ವಿಂಬಲ್ಡನ್(Wimbledon 2023) ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ದಾಖಲೆಯ 35ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಮೊದಲ ಸೆಮಿಫೈನಲ್‌ನಲ್ಲಿ ಇಟಲಿಯ 21 ವರ್ಷದ ಜಾನಿಕ್ ಸಿನ್ನರ್ ಅವರನ್ನು 6-3, 6-4, 7-6 (4) ನೇರ ಸೆಟ್‌ಗಳಂದ ಮಣಿಸಿ ಜೋಕೊ 9 ನೇ ವಿಂಬಲ್ಡನ್ ಫೈನಲ್‌ಗೆ ಹೆಜ್ಜೆ ಹಾಕಿದರು. ಉಭಯ ಆಟಗಾರರ ಈ ಹೋರಾಟ 2 ಗಂಟೆ 47 ನಿಮಿಷಗಳ ತನಕ ಸಾಗಿತು. ಅನುಭವಿ ಆಟಗಾರ ಜೋಕೊ ಎದುರು ಯುವ ಆಟಗಾರ ಸಿನ್ನರ್ ಮೂರನೇ ಸೆಟ್ನಲ್ಲಿ ಮಾತ್ರ ತೀವ್ರ ಪೈಪೋಟಿ ನೀಡಿದರು. ಮೊದಲೆರಡು ಸೆಟ್ನಲ್ಲಿ ಸಂಪೂರ್ಣ ವಿಫಲರಾದರು.
ಭಾನುವಾರ ನಡೆಯುವ ಫೈನಲ್ ಕಾದಾಟದಲ್ಲಿ ಅನುಭವಿ ಜೋಕೊವಿಕ್ ಅವರು ವಿಶ್ವ ನಂ.1 ಆಟಗಾರ ಕಾರ್ಲೋಸ್ ಅಲ್ಕರಾಜ್(Carlos Alcaraz) ಅವರನ್ನು ಎದುರಿಸಲಿದ್ದಾರೆ. ಜೊಕೊವಿಚ್ ಅವರು ಚಾಂಪಿಯನ್ ಆದರೆ ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರ ದಾಖಲೆ ಸರಿಗಟ್ಟಲಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರನ್ನು 6-3, 6-3, 6-3 ನೇರ ಸೆಟ್‌ಗಳಿಂದ ಹಿಮ್ಮಟ್ಟಿಸಿ ಫೈನಲ್ ಪ್ರವೇಶ ಪಡೆದರು. ಈಗಾಗಲೇ ದಾಖಲೆಯ 23 ಗ್ರ್ಯಾನ್‌ಸ್ಲಾಮ್ ಕಿರೀಟ ಗೆದ್ದಿರುವ ಜೋಕೊ ಈ ಟೂರ್ನಿಯಲ್ಲಿ ಗೆದ್ದರೆ ಅತೀ ಹೆಚ್ಚು 24 ಗ್ರ್ಯಾನ್‌ಸ್ಲಾಮ್ ಗೆದ್ದ ಸಾಧಕಿ ಮಾರ್ಗರೇಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿದೂಗಿಸಲಿದ್ದಾರೆ.
Blockbuster 🏆@carlosalcaraz and @DjokerNole coming soon… 🔜#Wimbledon pic.twitter.com/Z0ZTEt8W3Q
— Wimbledon (@Wimbledon) July 14, 2023
ಚೊಚ್ಚಲ ಗ್ರ್ಯಾನ್‌ಸ್ಲಾಮ್ ನಿರೀಕ್ಷೆಯಲ್ಲಿ ಜಬೇರ್-ವೊಂದ್ರೊಸೋವಾ
ಇಂದು(ಶನಿವಾರ) ನಡೆಯಲಿರುವ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಟ್ಯುನೀಷಿಯಾದ ಓನ್ಸ್ ಜಬೇರ್ ಮತ್ತು ಜೆಕ್ ರಿಪಬ್ಲಿಕ್‌ನ ಮಾರ್ಕೆಟಾ ವೋಂಡ್ರೂಸೋವಾ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಇದು ಉಭಯ ಆಟಗಾರ್ತಿಯರಿಗೂ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ. ಇಲ್ಲಿ ಯಾರೇ ಗೆದ್ದರು ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಲಿದ್ದಾರೆ. ಶ್ರೇಯಾಂಕರಹಿತ ಆಟಗಾರ್ತಿಯೊಬ್ಬರು ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತು ತಲುಪಿರುವುದು 60 ವರ್ಷಗಳಲ್ಲಿ ಇದೇ ಮೊದಲು.
ಇದನ್ನೂ ಓದಿ Wimbledon 2023: ಫೆಡರರ್ ದಾಖಲೆ ಸರಿಗಟ್ಟಿದ ಜೊಕೋವಿಕ್; 24ನೇ ಗ್ರ್ಯಾನ್‌ಸ್ಲಾಮ್ ಕನಸು ಜೀವಂತ
ಗುರುವಾರ ಸೆಂಟರ್ ಕೋರ್ಟ್‌ನಲ್ಲಿ ನಡೆದಿದ್ದ ಮೊದಲ ಸೆಮಿಫೈನಲ್‌ನಲ್ಲಿ ಸ್ವಿಟೋಲಿನಾ ಅವರನ್ನು ಜೆಕ್ ಗಣರಾಜ್ಯದ ತಾರೆ ಮಾರ್ಕೆಟಾ ವೋಂಡ್ರೂಸೋವಾ ಅವರು ನೇರ ಸೆಟ್‌ಗಳಿಂದ ಉರುಳಿಸಿ ಫೈನಲ್ ಹಂತಕ್ಕೇರಿದ್ದರು. ಜಬೇರ್ ಅವರು ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು 6-7 (5-7), 6-4, 6-3 ಸೆಟ್‌ಗಳಿಂದ ಸೋಲಿಸಿದ್ದರು.