ಲಂಡನ್: ಭಾರತದ ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ(Rohan Bopanna) ಮತ್ತು ಆಸ್ಟ್ರೇಲಿಯದ ಜತೆಗಾರ ಮ್ಯಾಥ್ಯೂ ಎಬ್ಡೆನ್(Matthew Ebden) ಅವರು ವಿಂಬಲ್ಡನ್ ಟೂರ್ನಿಯ(Wimbledon 2023) ಸೆಮಿಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಡೋ-ಆಸೀಸ್ ಜೋಡಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್-ಬ್ರಿಟಿಷ್ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್ ಸ್ಕಾಪ್‌ಸ್ಕಿ ಅವರೆದುರು 5-7, 4-6 ನೇರ ಸೆಟ್‌ಗಳಿಂದ ಪರಾಭವಗೊಂಡರು. ಈ ಮೂಲಕ 43 ವರ್ಷದ ಬೋಪಣ್ಣ ಅವರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳುವ ಅವಕಾಶ ಕಳೆದುಕೊಂಡರು.
ಬುಧವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಬೋಪಣ್ಣ-ಎಬ್ಡೆನ್ ಅವರು ನೆದರ್ಲೆಂಡ್ಸ್‌ನ ತಾಲೋನ್ ಗ್ರೀಕ್‌ಸ್ಪೂರ್ ಮತ್ತು ಬಾರ್ಟ್ ಸ್ಟೆವೆನ್ಸ್ ಅವರನ್ನು 6-7 (3-6, 7-5, 6-2 )ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದರು. ಆದರೆ ಸೆಮಿಯಲ್ಲಿ ಎಡವಿದರು. ಎದುರಾಳಿಗೆ ಯಾವುದೇ ಹಂತದಲ್ಲಿಯೂ ಪೈಪೋಟಿ ನೀಡಲು ಸಾಧ್ಯವಾಗದೆ ನಿರಶಾದಾಯಕ ಸೋಲು ಕಂಡರು.
ಇದನ್ನೂ ಓದಿ Rohan Bopanna: ಡೇವಿಸ್ ಕಪ್ ವಿದಾಯಕ್ಕೆ ರೋಹನ್ ಬೋಪಣ್ಣ ನಿರ್ಧಾರ
ಸ್ವಿಟೋಲಿನಾ, ಸಬಲೆಂಕಾಗೆ ಸೋಲು
ಗುರುವಾರ ಸೆಂಟರ್ ಕೋರ್ಟ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸ್ವಿಟೋಲಿನಾ ಅವರನ್ನು ಜೆಕ್ ಗಣರಾಜ್ಯದ ತಾರೆ ಮಾರ್ಕೆಟಾ ವೋಂಡ್ರೂಸೋವಾ ಅವರು ನೇರ ಸೆಟ್‌ಗಳಿಂದ ಉರುಳಿಸಿ ಫೈನಲ್ ಹಂತಕ್ಕೇರಿದರು. ಶನಿವಾರ ನಡೆಯುವ ಫೈನಲ್ ಹೋರಾಟದಲ್ಲಿ ವೋಂಡ್ರೂಸೋವಾ ಅವರು ಓನ್ಸ್ ಜೆಬ್ಯೂರ್ ಅವರನ್ನು ಎದುರಿಸಲಿದ್ದಾರೆ. ಜೆಬ್ಯೂರ್ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು 6-7 (5-7), 6-4, 6-3 ಸೆಟ್‌ಗಳಿಂದ ಸೋಲಿಸಿದರು. ಶ್ರೇಯಾಂಕರಹಿತ ಆಟಗಾರ್ತಿಯೊಬ್ಬರು ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತು ತಲುಪಿರುವುದು 60 ವರ್ಷಗಳಲ್ಲಿ ಇದೇ ಮೊದಲು.
ಡೆವಿಸ್ ಕಪ್‌ಗೆ ವಿದಾಯ ಹೇಳಲಿದ್ದಾರೆ ಬೋಪಣ್ಣ
ಬೋಪಣ್ಣ(Rohan Bopanna) ಅವರು ಮುಂದಿನ ಸೆಪ್ಟಂಬರ್‌ನಲ್ಲಿ ಡೇವಿಸ್ ಕಪ್(Davis Cup) ಟೆನಿಸ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಮೂಲತಃ ಕೊಡಗಿನವರಾದ 43 ವರ್ಷದ ಬೋಪಣ್ಣ ಭಾರತದ ಟೆನಿಸ್‌ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 2002ರಲ್ಲಿ ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಿದ ಅವರು ಎಟಿಪಿ ಟೂರ್‌ಗಳಲ್ಲಿ ಸಕ್ರಿಯರಾಗಿದ್ದು, ಭಾರತವನ್ನು 32 ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ 12 ಸಿಂಗಲ್ಸ್ ಮತ್ತು 10 ಡಬಲ್ಸ್ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ದಿಗ್ಗಜ ಲಿಯಾಂಡರ್ ಪೇಸ್ ಅವರು 58 ಪಂದ್ಯಗಳಲ್ಲಿ ಆಡುವ ಮೂಲಕ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ.