ಮೆಲ್ಬೋರ್ನ್: ಭಾರತೀಯರು ದೀಪಾವಳಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದರೆ ಅತ್ತ ಕಾಂಗರೂಗಳ ನಾಡಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ (IND-PAK) ವಿರುದ್ಧ ಪಂದ್ಯವನ್ನಾಡಲು ಸಜ್ಜಾಗಿದೆ. ಟಿ20 ವಿಶ್ವ ಕಪ್‌ನ ಈ ಅಸಲಿ ಹೋರಾಟ ಕಾಣಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಲ್ಲಿ ನಿಂತಿದೆ. ಇನ್ನೊಂದೆಡೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ದಟ್ಟವಾಗಿದೆ.
ಕಳೆದ ವರ್ಷದ ಸೋಲಿನ ನಿರಾಸೆಯನ್ನು ಬದಿಗೊತ್ತಿ ರೋಹಿತ್ ಶರ್ಮಾ ಸಾರಥ್ಯದಲ್ಲಿ ಬ್ಲೂಬಾಯ್ಸ್ ಹೊಸ ಉತ್ಸಾಹದಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅರ್ಹತಾ ಸುತ್ತಿನ ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ.
ಭಾರತ ಬ್ಯಾಟಿಂಗ್ ಬಲಿಷ್ಠ
ನಾಯಕ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಪಂತ್ ಮತ್ತು ಪಾಂಡ್ಯ ಅವರನ್ನೊಳಗೊಂಡ ಭಾರತ ತಂಡದ ಬ್ಯಾಟಿಂಗ್ ಬಲಿಷ್ಠವಾಗಿ ಗೋಚರಿಸಿದೆ. ಇವರಲ್ಲಿ ಕನಿಷ್ಠ ಮೂವರು ಸಿಡಿದು ನಿಂತರೂ ತಂಡ ಬೃಹತ್ ಮೊತ್ತ ದಾಖಲಿಸುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಏಷ್ಯಾ ಕಪ್ ಬಳಿಕ ಉತ್ತಮ ಬ್ಯಾಟಿಂಗ್ ಫಾರ್ಮ್‌ಗೆ ಬಂದಿರುವ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಬ್ಯಾಟಿಂಗ್ ಮೇಲೆ ಹೆಚ್ಚಿನ ವಿಶ್ವಾಸ ಇರಿಸಲಾಗಿದೆ. ಇನ್ನು ವಿಶ್ವ ಕಪ್ ಕೂಟದಲ್ಲಿ ಪಾಕ್ ವಿರುದ್ಧ ವಿರಾಟ್ ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಈ ನಿಟಿನಲ್ಲಿ ಕೊಹ್ಲಿ ಬ್ಯಾಟಿಂಗ್ ಅಬ್ಬರ ಇಲ್ಲೂ ನಿರೀಕ್ಷಿಸಬಹುದು.
ಪಂತ್‌ಗೆ ಅವಕಾಶ ಸಿಕ್ಕಿತೇ?
ಯುವ ಆಟಗಾರ ರಿಷಭ್ ಪಂತ್ ಕಳೆದ ಕೆಲವು ಸರಣಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಆದ್ದರಿಂದ ಪಂತ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಫಿನಿಶರ್ ಪಾತ್ರವಹಿಸುವ ಆಟಗಾರನಾಗಿ ದಿನೇಶ್ ಕಾರ್ತಿಕ್ ಯಶಸ್ಸು ಕಂಡಿರುವ ಜತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಬಲ್ಲರು. ಆದ್ದರಿಂದ ತಂಡ ಕಾರ್ತಿಕ್‌ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚು.
ಶಮಿ ಮೇಲೆ ಬೌಲಿಂಗ್ ಹೊಣೆ
ವೇಗಿ ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಮೇಲೆ ಇಡೀ ತಂಡ ಅವಲಂಬಿತವಾಗಿದೆ! ಹಾಗಾಗಿ ಶಮಿ ಬೌಲಿಂಗ್‌ನಲ್ಲಿ ಪೂರ್ಣ ಭಾರವನ್ನು ಹೊರಲೇಬೇಕಾಗಿದೆ. ಅವರಿಗೆ ವೇಗಿ ಭುವನೇಶ್ವರ್, ಅರ್ಶ್‌ದೀಪ್ ಸಿಂಗ್ ಸ್ಪಿನ್ನರ್‌ಗಳಾದ ಚಹಲ್, ಅಶ್ವಿನ್ ನೆರವು ನೀಡಬೇಕಾಗಿದೆ. ಇವರೆಲ್ಲ ಒಂದಾಗಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿದರೆ ಭಾರತದ ಅಶ್ವಮೇಧವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
7ರ ಅದೃಷ್ಟ ಮತ್ತೆ ಮರುಕಳಿಸೀತೆ?
ಅಂಕಿ ಸಂಖ್ಯೆಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ಭಾರತ ಈ ಬಾರಿ ವಿಶ್ವ ಚಾಂಪಿಯನ್ ಆಗಬೇಕಿದೆ. ಏಕೆಂದರೆ ಭಾರತ 1983ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವ ಕಪ್ ಗೆದ್ದ ಬಳಿಕದ 6 ಆವೃತ್ತಿಗಳ ನಂತರ 7ನೇ ಪ್ರಯತ್ನದಲ್ಲಿ ಅಂದರೆ 2011ರಲ್ಲಿ 2ನೇ ಬಾರಿಗೆ ಏಕದಿನ ವಿಶ್ವ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೇ ಲೆಕ್ಕಾಚಾರದಲ್ಲಿ ನೋಡಿದರೆ ಭಾರತ ಈ ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಬೇಕು. ಏಕೆಂದರೆ 2007ರಲ್ಲಿ ಚೊಚ್ಚಲ ಟಿ20 ವಿಶ್ವ ಕಪ್ ಗೆದ್ದ ಬಳಿಕ ಭಾರತ ಕಳೆದ 6 ಆವೃತ್ತಿಗಳಲ್ಲಿ ವೈಫಲ್ಯ ಕಂಡಿತ್ತು. ಈ ಬಾರಿ 7ನೇ ಯತ್ನದಲ್ಲಿ ಮತ್ತೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತೇ ಎಂದು ಕಾದು ನೋಡಬೇಕಿದೆ.
ಪಾಕ್ ತಂಡವೂ ಬಲಿಷ್ಠ
ಭಾರತ ತಂಡದಂತೆ ಪಾಕ್ ಕೂಡ ಬಲಿಷ್ಠವಾಗಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಲ್ಲಿ ವೈವಿಧ್ಯಮಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ನಲ್ಲಿ ಮೊಹಮ್ಮದ್ ರಿಜ್ವಾನ್, ನಾಯಕ ಬಾಬರ್ ಅಜಂ ಬಲವಾದರೆ ಅತ್ತ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ, ಶದಾಬ್, ಅಲಿ, ರವೂಫ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಆಡಲೇಬೇಡಿ!; ಓವೈಸಿ ಹೇಳಿಕೆಯ ಹಿಂದಿನ ಮರ್ಮವೇನು?