ದೋಹಾ: ಜಗತ್ತನ್ನೇ ತುದಿಗಾಲ ಮೇಲೆ ನಿಲ್ಲಿಸಿದ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಚರಿತ್ರಾರ್ಹ ಗೆಲುವು ಸಾಧಿಸಿದ (FIFA World Cup) ಅರ್ಜೆಂಟೀನಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಸಾವಿರಾರು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಫುಟ್ಬಾಲ್ ಪಂದ್ಯದ ರೋಚಕತೆಗೆ ಸಾಣೆ ಹಿಡಿದ ಅರ್ಜೆಂಟೀನಾ ಹಾಗೂ ಕಾಲ್ಚೆಂಡಾಟದ ದಂತಕತೆ ಲಿಯೋನೆಲ್ ಮೆಸ್ಸಿಗೆ ಶುಭಾಶಯ ತಿಳಿಸಿದ್ದಾರೆ. ಹಾಗಾದರೆ, ಜಗತ್ತಿನ ಯಾವ ನಾಯಕರು ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದರು, ಹೇಗೆ ಶುಭಾಶಯ ತಿಳಿಸಿದರು ಎಂಬುದರ ಇಣುಕು ನೋಟ ಇಲ್ಲಿದೆ.
ರಣರೋಚಕ ಪಂದ್ಯ ಎಂದ ಮೋದಿ
“ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವೆ ನಡೆದ ಫೈನಲ್ ಪಂದ್ಯವು ಫುಟ್ಬಾಲ್ ಇತಿಹಾಸದ ರೋಚಕ ಪಂದ್ಯಗಳಲ್ಲಿ ಒಂದಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಗೆಲುವು ಸಾಧಿಸಿದ ಅರ್ಜೆಂಟೀನಾ ತಂಡಕ್ಕೆ ಶುಭಾಶಯ ತಿಳಿಸಿದ ಮೋದಿ, “ಇಡೀ ಟೂರ್ನಿಯಲ್ಲಿ ಅರ್ಜೆಂಟೀನಾ ಸುತ್ಯರ್ಹ ಪ್ರದರ್ಶನ ತೋರಿದೆ. ಹಾಗಾಗಿಯೇ, ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದಲ್ಲಿರುವ ಅಭಿಮಾನಿಗಳು ಮೆಸ್ಸಿ ಸೇರಿ ಅರ್ಜೆಂಟೀನಾ ತಂಡದ ಪ್ರದರ್ಶನವನ್ನು ಆನಂದಿಸಿದ್ದಾರೆ. ಹಾಗೆಯೇ, ಫ್ರಾನ್ಸ್ ಪ್ರದರ್ಶನವೂ ಶ್ಲಾಘನೀಯ” ಎಂದಿದ್ದಾರೆ.
ಮಾರ್ಟಿನೆಜ್‌ಗೆ ಸಚಿನ್ ವಿಶೇಷ ಅಭಿನಂದನೆ
ಫ್ರಾನ್ಸ್ ಗೋಲುಗಳನ್ನು ತಡೆದು, ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಅರ್ಜೆಂಟಿನಾದ ಎಮಿ ಮಾರ್ಟಿನೆಜ್‌ಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. “ಅರ್ಹ ಗೆಲುವು ಸಾಧಿಸಿದ ಅರ್ಜೆಂಟೀನಾ ಹಾಗೂ ಲಿಯೋನೆಲ್ ಮೆಸ್ಸಿ ಅವರಿಗೆ ಶುಭಾಶಯಗಳು” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | FIFA World Cup | ಕಾಲ್ಚೆಂಡಿನ ಕಾಲ್ಚಳಕ, ರೋಚಕ ಆಟದ ಫೋಟೊಗಳನ್ನು ನೋಡುವುದೇ ಪುಳಕ