ದಾಂಬುಲಾ: ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್(Womens Asia Cup T20) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ(India Women vs Bangladesh Women) ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಇಂದು(ಶುಕ್ರವಾರ) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿತು. ಫೈನಲ್ನಲ್ಲಿ ಪಾಕಿಸ್ತಾನ ಅಥವಾ ಲಂಕಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದೆ.
ಶುಕ್ರವಾರ ಇಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 80 ರನ್ ಬಾರಿಸಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 11 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 83 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಗುರಿ ಬೆನ್ನಟ್ಟಿದ ಭಾರತ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ(26*) ಮತ್ತು ಉಪನಾಯಕಿ ಸ್ಮೃತಿ ಮಂಧಾನ(55*) ರನ್ ಬಾರಿಸಿ ಅಜೇಯರಾಗಿ ಉಳಿದರು. ಶಫಾಲಿ 25 ರನ್ ಪೂರ್ತಿಗೊಳಿಸಿದ ವೇಳೆ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಲಂಕಾ ನಾಯಕಿ ಚಾಮರಿ ಅತ್ತಪಟ್ಟು(180 ರನ್) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಜಿಗಿದರು. ಶಫಾಲಿ ಸದ್ಯ 184* ರನ್ ಬಾರಿಸಿದ್ದಾರೆ. ಸ್ಮೃತಿ ಮಂಧಾನ ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾಕ್ಕೆ ಮಧ್ಯಮ ವೇಗಿ ರೇಣುಕಾ ಸಿಂಗ್ ಘಾತಕ ದಾಳಿಯ ಮೂಲಕ ಆಘಾತವಿಕ್ಕಿದರು. ಆರಂಭಿಕ ಮೂರು ಆಟಗಾರರ ವಿಕೆಟ್ಗಳನ್ನು ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇವರ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ 21 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. 4 ಓವರ್ ಬೌಲಿಂಗ್ ನಡೆಸಿದ ರೇಣುಕಾ ಸಿಂಗ್ 1 ಮೇಡನ್ ಸಹಿತ ಕೇವಲ 10 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50 ವಿಕೆಟ್ಗಳ ಮೈಲುಗಲ್ಲು ತಲುಪಿದರು.
ಇದನ್ನೂ ಓದಿ Womens Asia Cup: ಶಫಾಲಿ ಬ್ಯಾಟಿಂಗ್ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್ ಜಯ
ರೇಣುಕಾ ಸಿಂಗ್ ಓವರ್ ಮುಕ್ತಾಯದ ಬಳಿಕ ಸ್ಪಿನ್ನ್ ಬೌಲರ್ ರಾಧಾ ಯಾದವ್ ತಮ್ಮ ಸ್ಪಿನ್ ಕೈಚಳಕ ತೋರಿದರು. ಇವರು ಕೂಡ 4 ಓವರ್ ಬೌಲಿಂಗ್ ಮೂಲಕ 14 ರನ್ ನೀಡಿ 3 ವಿಕೆಟ್ ಕಬಳಿಸಿದರು. ಒಂದು ಮೇಡನ್ ಓವರ್ ಕೂಡ ನಡೆಸಿದರು. ಬಾಂಗ್ಲಾ ತಂಡಕ್ಕೆ ಆಸರೆಯಾದದ್ದು ನಾಯಕಿ ನಿಗರ್ ಸುಲ್ತಾನಾ ಮಾತ್ರ. 4ನೇ ಕ್ರಮಾಂಕದಲ್ಲಿ ಆಡಲಿಳಿದ ಸುಲ್ತಾನಾ 51 ಎಸೆತ ಎದುರಿಸಿ 32 ರನ್ ಬಾರಿಸಿದರು. ಇವರ ಈ ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟದ ನೆರವಿನಿಂದ ಬಾಂಗ್ಲಾ 50 ಗಡಿ ದಾಡಿತು. ಅಂತಿಮ ಹಂತದಲ್ಲಿ ಶೋರ್ನಾ ಅಖ್ತರ್ 19 ರನ್ ಬಾರಿಸಿ ಅಜೇಯರಾಗು ಉಳಿದರು. ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಕಿತ್ತರು.
ರಾತ್ರಿ ನಡೆಯುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಶ್ರೀಲಂಕಾ ಮುಖಾಮುಖಿಯಾಗಲಿವೆ. ತಂಡದ ಬಲಾಬಲ ನೋಡುವಾಗ ಲಂಕಾ ಹೆಚ್ಚು ಬಲಿಷ್ಠವಾಗಿ ಗೋಚರಿಸಿದೆ.