ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಭಾರತದ ನಿಖತ್ ಜರೀನ್(Nikhat Zareen) ಅವರು ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಟೂರ್ನಿಯಲ್ಲಿಯೂ ಅವರು ಚಿನ್ನದ ಪದಕ ಜಯಿಸಿದ್ದರು.
ಭಾನುವಾರ ಇಲ್ಲಿ ನಡೆದ 50 ಕೆಜಿ ವಿಭಾಗದ ಫೈನಲ್ ಕಾದಾಟದಲ್ಲಿ ನಿಖತ್ ಜರೀನ್ ಅವರು ವಿಯೆಟ್ನಾಂನ ಗುಯೆನ್ ಥಿ ಟಾಮ್(Nguyen Thi Tam) ಸವಾಲನ್ನು ಮಟ್ಟಿನಿಲ್ಲುವಲ್ಲಿ ಯಶಸ್ಸು ಸಾಧಿಸಿದರು. ಈ ಮೂಲಕ ಮೇರಿ ಕೋಮ್(6 ಬಾರಿ) ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು. ಅವರು ಕೂಟ ಸತತವಾಗಿ ಈ ಟೂರ್ನಿಯಲ್ಲಿ ಪದಕ ಗೆದ್ದಿದ್ದರು. ಇದೀಗ ನಿಖತ್ ಕೂಡ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಬಲಿಷ್ಠ ಪಂಚ್ಗಳ ಮೂಲಕ ಮೆರೆದಾಡಿದ ನಿಖತ್ ಜರೀನ್ 5-0 ಅಂತರದ ಗೆಲುವು ಸಾಧಿಸಿದರು. ಅವರ ಸತತ ಪಂಚ್ಗಳಿಗೆ ಬೆದರಿದ ಎದುರಾಳಿ ಗುಯೆನ್ ಥಿ ಟಾಮ್ ಒಂದೂ ಬೌಟ್ನಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ಸು ಕಾಣಲಿಲ್ಲ.
ಇದನ್ನೂ ಓದಿ Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ
ಒಟ್ಟಾರೆ ಭಾರತಕ್ಕೆ ಈ ಟೂರ್ನಿಯಲ್ಲಿ ಸಿಕ್ಕ ಮೂರನೇ ಚಿನ್ನದ ಪದಕ ಇದಾಗಿದೆ. ಶನಿವಾರ ನಡೆದ 48 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಗಂಗಾಸ್ ಅವರು ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ ಚಿನ್ನ ಗೆದ್ದು ಭಾರತಕ್ಕೆ ಮೊದಲ ಪದಕದ ಖಾತೆ ತೆರೆದಿದ್ದರು. ಇದರ ಬೆನ್ನಲ್ಲೇ 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಚೀನಾದ ವಾಂಗ್ ಲೀನಾ ಅವರನ್ನು ಮಣಿಸಿದ್ದರು.