Site icon Vistara News

Women’s IPL | ಮುಂದಿನ ವರ್ಷ ಮಾರ್ಚ್‌ನಲ್ಲಿ ಮಹಿಳೆಯರ ಐಪಿಎಲ್‌, ಐದು ತಂಡಗಳ ಟೂರ್ನಿಗೆ ಸಿದ್ಧತೆ

Women's IPL

ಮುಂಬಯಿ : ಉದ್ಘಾಟನಾ ಆವೃತ್ತಿಯ ಮಹಿಳೆಯರ ಐಪಿಎಲ್‌ (Women’s IPL) ಮುಂದಿನ ಮಾರ್ಚ್‌ನಲ್ಲಿ ನಡೆಯಲಿದೆ ಎಂಬುದಾಗಿ ವರದಿಯಾಗಿದೆ. ಅಂತೆಯೇ ಮೊದಲ ಆವೃತ್ತಿಯಲ್ಲಿ ಐದು ತಂಡಗಳ ನಡುವೆ ಟೂರ್ನಿ ನಡೆಯಲಿದ್ದು, ತಂಡವೊಂದರಲ್ಲಿ ಗರಿಷ್ಠ ೫ ವಿದೇಶಿ ಆಟಗಾರ್ತಿಯರಿಗೆ ಅವಕಾಶ ಕೊಡುವುದು ಯೋಜನೆಯಾಗಿದೆ ಎನ್ನಲಾಗಿದೆ.

ಒಟ್ಟು ೨೦ ಲೀಗ್‌ ಪಂದ್ಯಗಳು ನಡೆಯಲಿದ್ದು, ಎಲ್ಲ ತಂಡಗಳು ಒಂದು ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. ಅಂಕಪಟ್ಟಿಯ ಮೊದಲೆರಡು ತಂಡಗಳು ಫೈನಲ್‌ಗೇರಲಿದ್ದು, ಪ್ರಶಸ್ತಿಗಾಗಿ ಸೆಣಸಾಡಲಿವೆ ಎಂದು ಪಿಟಿಐ ವರದಿ ಮಾಡಿದೆ.

“ಸ್ಪರ್ಧಾತ್ಮಕ ಟೂರ್ನಿ ನಡೆಸುವ ಉದ್ದೇಶದಿಂದ ಈ ಬಾರಿ ಐದು ತಂಡಗಳ ಮಹಿಳೆಯರ ಐಪಿಎಲ್ ಆಯೋಜಿಸುವ ಗುರಿಯನ್ನು ಹೊಂದಲಾಗಿದೆ. ಅಂತೆಯೇ ಒಂದು ತಂಡದಲ್ಲಿ ಐದು ವಿದೇಶಿ ಆಟಗಾರ್ತಿಯರಿಗೆ ಅವಕಾಶ ನೀಡಲಾಗುವುದು. ಅಂಕಪಟ್ಟಿಯ ಆಧಾರದಲ್ಲಿ ಮೊದಲೆರಡು ಸ್ಥಾನವನ್ನು ನಿರ್ಧರಿಸಲಾಗುವುದು,” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮಹಿಳೆಯರ ವಿಶ್ವ ಕಪ್‌ ೨೦೨೩ರ ಫೆಬ್ರವರಿ ೯ರಿಂದ ೨೬ರವರೆಗೆ ನಡೆಯಲಿದೆ. ಅದು ಮುಗಿದ ತಕ್ಷಣವೇ ಮಹಿಳೆಯರ ಐಪಿಎಲ್‌ ಅಯೋಜಿಸುವುದು ಬಿಸಿಸಿಐ ಉದ್ದೇಶ. ಎರಡು ತಾಣಗಳಲ್ಲಿ ಪಂದ್ಯ ನಡೆಯಲಿದ್ದು, ಮೊದಲ ಹತ್ತು ಪಂದ್ಯ ಒಂದು ಕಡೆ ನಡೆದರೆ ಉಳಿದ ೧೦ ಪಂದ್ಯಗಳು ಮತ್ತೊಂದು ತಾಣಕ್ಕೆ ಹೋಗಲಿದೆ. ಕೇವಲ ಐದು ತಂಡಗಳು ಮಾತ್ರ ಇರುವ ಕಾರಣ “ಹೋಮ್‌ ಮತ್ತು ಅವೇ’ ಮಾದರಿಯನ್ನು ಅನುಸರಿಸುವುದು ಕಷ್ಟ ಎಂಬುದಾಗಿ ಹೇಳಲಾಗಿದೆ.

ಇದನ್ನೂ ಓದಿ | Team India | ಇಂಗ್ಲೆಂಡ್‌ ತಂಡದ ವಿರುದ್ಧ ಭಾರತೀಯ ಮಹಿಳೆಯರಿಗೆ 7 ವಿಕೆಟ್‌ ಜಯ

Exit mobile version