Site icon Vistara News

WPL 2024 : ಈ ಬಾರಿಯೂ ಬೆಂಗಳೂರಿನಲ್ಲಿ ನಡೆಯಲ್ಲ ಮಹಿಳೆಯರ ಐಪಿಎಲ್​

WPL 2023 winner

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024ರ (WPL 2024) ಯಶಸ್ವಿ ಹರಾಜಿನ ನಂತರ, ಪಂದ್ಯಾವಳಿಯ ಎರಡನೇ ಆವೃತ್ತಿಯ ಉತ್ಸಾಹವು ಹೆಚ್ಚಾಗಿದೆ. ಏಕೆಂದರೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಕಾಯುತ್ತಿದ್ದಾರೆ. ಇತ್ತೀಚೆಗೆ, ಪಂದ್ಯಾವಳಿಯ ಮುಂಬರುವ ಆವೃತ್ತಿಯ ಬಗ್ಗೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ, ಟಿ20 ಕ್ರಿಕೆಟ್​ ವೈಭವವು 2024 ರ ಫೆಬ್ರವರಿ ಎರಡನೇ ಅಥವಾ ಮೂರನೇ ವಾರದಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇವೆಲ್ಲದರ ನಡುವೆ ಪಂದ್ಯಾವಳಿಯು ಭಾರತದ ಕೇವಲ ಒಂದು ರಾಜ್ಯದಲ್ಲಿ ನಡೆಯಲಿದೆ ಎಂದು ಶಾ ಹೇಳಿದ್ದಾರೆ. ಈ ಮೂಲಕ ಅವರು ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಆರ್​ಸಿಬಿಯ ಅಭಿಮಾನಿಗಳಿಗೆ ತಮ್ಮ ತಂಡ ಬೆಂಗಳೂರಿನಲ್ಲಿ ಆಡುವುದನ್ನು ನೊಡುವ ಅವಕಾಶ ಸಿಗುವುದಿಲ್ಲ. ವಿಶೇಷವೆಂದರೆ, ಡಬ್ಲ್ಯುಪಿಎಲ್​ ಮೊದಲ ಆವೃತ್ತಿಯನ್ನು ಮುಂಬೈನಲ್ಲಿ ಮಾತ್ರ ಎರಡು ಸ್ಥಳಗಳಲ್ಲಿ ಆಡಲಾಯಿತು: ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಂದ್ಯಗಳು ನಡೆದಿದ್ದವು. ಈ ಬಾರಿಯೂ ಎಲ್ಲ ಪಂದ್ಯಗಳನ್ನು ಅಲ್ಲೇ ನಡೆಯುವ ಸಾಧ್ಯತೆಗಳಿವೆ ಎಂಬುದು ಜಯ್​ ಶಾ ಹೇಳಿಕೆಯಿಂದ ಅಂದಾಜು ಮಾಡಿಕೊಳ್ಳಬಹುದು.

ಆಯೋಜನೆಗೆ ಅನುಕೂಲ

“ನಾವು ಫೆಬ್ರವರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದ್ದೇವೆ. ಬಹುಶಃ ನಾವು ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರಾರಂಭಿಸುತ್ತೇವೆ. ಸ್ಥಳಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಒಂದು ರಾಜ್ಯದಲ್ಲಿ ಮಾತ್ರ ನಡೆಯಲಿದೆ. ನಿರ್ವಹಣೆಗೆ ಅದು ಉತ್ತಮವಾಗಿರುತ್ತದೆ. ಈ ಬಾರಿ ಲಾಜಿಸ್ಟಿಕ್ಸ್ ನಮಗೆ ದೊಡ್ಡ ಸವಾಲು ಮುಂದಿನ ಬಾರಿ ನಾವು ಅದನ್ನು ಇನ್ನಷ್ಟು ಸ್ಥಳಗಳಿಗೆ ಕೊಂಡೊಯ್ಯಬಹುದು ,” ಎಂದು ಶಾ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಮೂವರು ಅನ್​ಕ್ಯಾಪ್ಡ್​ ಆಟಗಾರರು ಇವರು

ಫ್ರಾಂಚೈಸಿಗಳೊಂದಿಗೆ ಚರ್ಚೆ

ನಾವು ಟೂರ್ನಿಯನ್ನು ಬೆಂಗಳೂರು [ಕರ್ನಾಟಕ] ಅಥವಾ ಉತ್ತರ ಪ್ರದೇಶದಲ್ಲೂ ಮಾಡಬಹುದು. ನಮಗೆ ಅನೇಕ ಸ್ಥಳಗಳಿವೆ, ಗುಜರಾತ್​​ನಲ್ಲಿಯೂ ಅಹಮದಾಬಾದ್, ರಾಜ್ಕೋಟ್ ಸ್ಟೇಡಿಯಮ್​ಗಳಿವೆ. ಕೆಲವು ವರ್ಷಗಳ ನಂತರ ಬರೋಡಾ ತಮ್ಮದೇ ಆದ ಕ್ರೀಡಾಂಗಣವನ್ನು ನಿರ್ಮಿಸಬಹುದು. ಮೂಲತಃ, ಇದು ಫ್ರಾಂಚೈಸಿಗಳು ಮತ್ತು ಬಿಸಿಸಿಐ ನಡುವಿನ ನಿರ್ಧಾರವಾಗಿದೆ. ನಾವು ಜತೆಗೆ ಕುಳಿತು ಚರ್ಚಿಸಿ ನಿರ್ಧರಿಸುತ್ತೇವೆ. ಟೂರ್ನಿ ಒಂದು ರಾಜ್ಯದಲ್ಲಿರುತ್ತದೆ, ಅದು ಖಚಿತ” ಎಂದು ಅವರು ಹೇಳಿದ್ದಾರೆ.

ದುಬಾರಿ ಬೆಲೆಯ ಆಟಗಾರ್ತಿ

ಕಾಶ್ವೀ ಗೌತಮ್ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್​ಕ್ಯಾಪ್ಟ್​ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಎರಡನೇ ಆವೃತ್ತಿಯ ಹರಾಜಿನಲ್ಲಿ ಐದು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಭರ್ತಿ ಮಾಡಿಕೊಂಡಿವೆ. ಮೆಗಾ ಈವೆಂಟ್​​ನಲ್ಲಿ 30 ಆಟಗಾರರು ಮಾರಾಟವಾದರು. ಅನ್ಕ್ಯಾಪ್ಡ್ ಭಾರತದ ಬೌಲರ್ ಕಾಶ್ವೀ ಗೌತಮ್ 2 ಕೋಟಿ ರೂ ಪಡೆದರು. ಇದು ಭಾರತದ ಅನ್​ಕ್ಯಾಪ್ಡ್​ ಆಟಗಾರರ ಸಾಲಿನಲ್ಲಿ ಹೊಸ ದಾಖಲೆಯಾಗಿದೆ. ಅನ್ನಾಬೆಲ್ ಸದರ್ಲ್ಯಾಂಡ್ ಇಬ್ಬರೂ ಕ್ರಮವಾಗಿ ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ಗೆ ಕ್ರಮವಾಗಿ 2 ಕೋಟಿ ರೂ.ಗೆ ಮಾರಾಟವಾದರು.

ಭಾರತದ ಮತ್ತೊಬ್ಬ ಅನ್​ಕ್ಯಾಪ್ಡ್​ ಆಟಗಾರ್ತಿ ವೃಂದಾ ದಿನೇಶ್ ಅವರನ್ನು ಯುಪಿ ವಾರಿಯರ್ಸ್ 1.30 ಕೋಟಿ ರೂ.ಗೆ ಖರೀದಿಸಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾದ ಅನುಭವಿ ಬೌಲರ್ ಶಬ್ನಿಮ್ ಇಸ್ಮಾಯಿಲ್ ಅವರನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 1.20 ಕೋಟಿ ರೂ.ಗೆ ಖರೀದಿಸಿದರೆ, ಫೋಬೆ ಲಿಚ್ಫೀಲ್ಡ್ ಅವರನ್ನು ಗುಜರಾತ್ ಜೈಂಟ್ಸ್ 1 ಕೋಟಿ ರೂ.ಗೆ ಖರೀದಿಸಿದೆ.

Exit mobile version