ದುಬೈ: ಒಂಬತ್ತನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ(Women’s T20 World Cup) ತಾಣ ಬಾಂಗ್ಲಾದೇಶದಿಂದ ಯುಎಇ(UAE)ಗೆ ಸ್ಥಳಾಂತರಗೊಂಡ ಬೆನ್ನಲ್ಲೇ ಇದೀಗ ಐಸಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ. ಪಂದ್ಯಾವಳಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. ದುಬಾೖ ಮತ್ತು ಶಾರ್ಜಾದಲ್ಲಿ ಒಟ್ಟಾರೆ 23 ಪಂದ್ಯಗಳು ನಡೆಯಲಿವೆ. ಒಟ್ಟು 19 ದಿನ ಪಂದ್ಯಾವಳಿ ಸಾಗಲಿದೆ.
ಸಾಂಪ್ರದಾಯಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತದ ಮಹಿಳಾ ತಂಡ ಅಕ್ಟೋಬರ್ 6 ರಂದು ಪಂದ್ಯವನ್ನಾಡಲಿದೆ. ಅಕ್ಟೋಬರ್ 13 ರಂದು ಆರು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಇದನ್ನೂ ಓದಿ ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್
ಪ್ರತಿಯೊಂದು ತಂಡವು ಬಣ ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಲಿದ್ದು ಅಗ್ರ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಸೆಮಿಫೈನಲ್ಸ್ ಅ. 17 ಮತ್ತು 18ರಂದು ನಡೆಯಲಿದ್ದರೆ ದುಬಾೖಯಲ್ಲಿ ಅ. 20ರಂದು ಫೈನಲ್ ಜರಗಲಿದೆ.
ಲೀಗ್ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇಲವ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್ ಓವರ್ ಕೂಡ ಟೈ ಆದರೆ ಇನ್ನೊಂದು ಸೂಪರ್ ಓವರ್ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್ ಓವರ್ ಜಾರಿಯಲ್ಲಿರುತ್ತದೆ.
ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ(ICC Women’s T20 World Cup) ಆತಿಥ್ಯ ಯುಎಇ(UAE)ಗೆ ಲಭಿಸಿತ್ತು. ಹೀಗಾಗಿ ವೇಳಾಪಟ್ಟಿಯಲ್ಲಿ ತಾಣಗಳ ಹೆಸರನ್ನು ಪರಿಷ್ಕೃತಗೊಳಿಸಲಾಗಿದೆ. ಪಂದ್ಯಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.