ಕೇಪ್ಟೌನ್: ದಕ್ಷಿಣ ಆಫ್ರಿಕಾ ತಂಡಕ್ಕೆ ಅಂಟಿಕೊಂಡಿರುವ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿಹಾಕುವ ಕಾಲ ಸನ್ನಿಹಿತವಾಗಿದೆ. ಇಂದು(ಭಾನುವಾರ ಫೆ.26) ನಡೆಯುವ ಮಹಿಳಾ ಟಿ20 ವಿಶ್ವಕಪ್ ಫೈನಲ್(Women’s T20 World Cup Final) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದರೆ ಈ ಅವಮಾನದಿಂದ ಹೊರಬರಲಿದೆ.
ದಕ್ಷಿಣ ಆಫ್ರಿಕಾದ ಪುರುಷರ ಹಾಗೂ ಮಹಿಳಾ ತಂಡಗಳು ಪ್ರತಿ ಬಾರಿ ಐಸಿಸಿ ಟೂರ್ನಿಗಳಲ್ಲಿ ಬಲಿಷ್ಠ ತಂಡವಾಗಿ ಉತ್ತಮ ಪ್ರದರ್ಶನ ತೋರುತ್ತದೆ. ಆದರೆ ಪ್ರಮುಖ ಘಟ್ಟದಲ್ಲಿ ಅದೃಷ್ಟ ಕೈ ಹಿಡಿಯದೆ ಸೋಲು ಕಾಣುತ್ತದೆ. ಕೆಲವು ಪಂದ್ಯ ಗೆಲ್ಲುವ ಹಂತದಲ್ಲಿದ್ದರೂ ಮಳೆ ಬಂದು ಸೋಲು ಕಂಡ ನಿದರ್ಶನಗಳು ಹಲವಾರು ಇದೆ. ಹೀಗಾಗಿ ಕ್ರಿಕೆಟ್ ಜಗತ್ತಿನಲ್ಲಿ ಈ ತಂಡಕ್ಕೆ ಚೋಕರ್ಸ್ ಎಂಬ ಹಣೆಪಟ್ಟಿ ಕಟ್ಟಲಾಗಿದೆ.
ದಕ್ಷಿಣ ಆಫ್ರಿಕಾ ಮೊದಲ ಸಲ ವಿಶ್ವಕಪ್ ಫೈನಲ್‌ಗೆ ಲಗ್ಗೆ ಹಾಕಿದೆ. ಇಲ್ಲಿ ಗೆದ್ದರೆ ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಈ ಬಾರಿ ಅದೃಷ್ಟ ದಕ್ಷಿಣ ಆಫ್ರಿಕಾ ತಂಡದ ಪರ ಇರುವಂತೆ ತೋರುತ್ತಿದೆ. ಏಕೆಂದರೆ ಲೀಗ್ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲು ಕಂಡರೂ ಬಳಿಕದ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಫೈನಲ್ ತಲುಪಿದೆ. ಅದರಲ್ಲೂ ಬಲಿಷ್ಠ ಇಂಗ್ಲೆಂಡ್ಗೆ ಸೋಲುಣಿಸಿದ್ದನ್ನು ಗಮನಿಸುವಾಗ ಈ ಬಾರಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟ ಅಲಂಕರಿಸುವ ಸೂಚನೆಯೊಂದು ಎದ್ದು ಕಾಣುತ್ತಿದೆ.
ವಿಶ್ವಕಪ್‌ನಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿರುವ ಆಸ್ಟ್ರೇಲಿಯಾ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಕಳೆದೆರಡು ಸಲದ ಚಾಂಪಿಯನ್ ಕೂಡ ಆಗಿರುವ ಆಸೀಸ್ ಈ ಬಾರಿಯೂ ಗೆದ್ದರೆ ಹ್ಯಾಟ್ರಿಕ್ ಸಾಧನೆ ಮಾಡಲಿದೆ. ಆಸೀಸ್ ಪರ ಎಲ್ಲಿಸ್ ಪೆರ್ರಿ, ಬೆತ್ ಮೂನಿ, ಮೆಗ್ ಲ್ಯಾನಿಂಗ್, ಆಯಶ್ಲಿ ಗಾರ್ಡನರ್, ಟಹ್ಲಿಯಾ ಮೆಕ್‌ಗ್ರಾತ್ ಯಾವ ಹಂತದಲ್ಲಿಯೂ ತಂಡಕ್ಕೆ ನೆರವಾಗಬಲ್ಲರು.
ಇದನ್ನೂ ಓದಿ Women’s T20 World Cup: ಕಣ್ಣೀರಿಟ್ಟ ಹಾಲಿ ನಾಯಕಿಯನ್ನು ಸಂತೈಸಿದ ಮಾಜಿ ನಾಯಕಿ
ದಕ್ಷಿಣ ಆಫ್ರಿಕಾ ಪರ ಲಾರಾ ವೋಲ್ವಾರ್ಟ್-ಟಾಜ್ಮಿನ್ ಬ್ರಿಟ್ಸ್ ಈ ಕೂಟದ ಅತ್ಯುತ್ತಮ ಆರಂಭಿಕ ಜೋಡಿ. ಇಬ್ಬರೂ ಟಾಪ್ ಫಾರ್ಮ್ನಲ್ಲಿದ್ದಾರೆ. ಹಾಗೆಯೇ ಬೌಲಿಂಗ್‌ನಲ್ಲಿ ಶಬಿ°ಮ್ ಇಸ್ಮಾಯಿಲ್-ಅಯಬೊಂಗಾ ಖಾಕಾ ಜೋಡಿಯೂ ಭರ್ಜರಿ ಲಯದಲ್ಲಿದೆ. ಈ ಪಂದ್ಯದಲ್ಲಿಯೂ ಇವರು ಉತ್ತಮ ಪ್ರದರ್ಶನ ತೋರಿದರೆ ತಂಡ ಮೇಲುಗೈ ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು.