Site icon Vistara News

Women’s T20 World Cup: ಆಸೀಸ್ ಮಣಿಸಲು ಸಜ್ಜಾದ ಟೀಮ್​ ಇಂಡಿಯಾ

womens-t20-world-cup-team-india-ready-to-defeat-aussies

womens-t20-world-cup-team-india-ready-to-defeat-aussies

ಕೇಪ್​ಟೌನ್​: ಐಸಿಸಿ ಮಹಿಳಾ ಟಿ20 ವಿಶ್ವ ಕಪ್​ನ ಸೆಮಿಫೈನಲ್​(Women’s T20 World Cup 2023 Semi Final) ಕಾದಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ಸವಾಲು ಎದುರಿಸಲು ಭಾರತ ತಂಡ(India vs Australia Semi Final) ಸಜ್ಜಾಗಿದೆ. ಉಭಯ ತಂಡಗಳ ಈ ಮುಖಾಮುಖಿ ಇಂದು(ಫೆ.23, ಗುರುವಾರ) ಕೇಟ್​ಟೌನ್​ನಲ್ಲಿ ನಡೆಯಲಿದೆ.

ಮೆಗ್‌ ಲ್ಯಾನಿಂಗ್‌ ನೇತೃತ್ವದ ಆಸ್ಟ್ರೇಲಿಯಾ ತಂಡ ಲೀಗ್‌ ಹಂತದ ನಾಲ್ಕೂ ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿ ಗೋಚರಿಸಿದೆ. ಇತ್ತ ಭಾರತ ‘ಬಿ’ ವಿಭಾಗದಲ್ಲಿ ಒಂದು ಪಂದ್ಯವನ್ನು ಸೋತು ದ್ವಿತೀಯ ಸ್ಥಾನಿಯಾಗಿದೆ. ಈವರೆಗಿನ 7 ವಿಶ್ವಕಪ್‌ ಕೂಟಗಳಲ್ಲಿ ಆಸ್ಟ್ರೇಲಿಯದ ವನಿತೆಯರು 6 ಸಲ ಫೈನಲ್‌ಗೆ ಲಗ್ಗೆಯಿರಿಸಿ ಸರ್ವಾಧಿಕ 5 ಸಲ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಕಳೆದೆರಡೂ ಕೂಟಗಳಲ್ಲಿ ಕಾಂಗರೂ ವನಿತೆಯರು ಪರಾಕ್ರಮ ಮೆರೆದಿದ್ದಾರೆ. ಈ ಸಲವೂ ಗೆದ್ದರೆ ಎರಡನೇ ಸಲ ಹ್ಯಾಟ್ರಿಕ್‌ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಅವಳಿ ಸೋಲಿಗೆ ಸೇಡು ಸಾಧ್ಯವೇ?

2020ರ ಆಸ್ಟ್ರೇಲಿಯಾ ಆತಿಥ್ಯದ ಟಿ20 ವಿಶ್ವ ಕಪ್​ ಕೂಟದಲ್ಲಿ ಭಾರತ ಫೈನಲ್‌ ಪ್ರವೇಶಿಸಿತ್ತು. ಆದರೆ ಅಲ್ಲಿ ಆಸೀಸ್‌ ವಿರುದ್ಧ ತೀವ್ರ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿ 99ಕ್ಕೆ ಕುಸಿದು ಟ್ರೋಫಿಯನ್ನು ಕಳೆದುಕೊಳ್ಳಬೇಕಾಯಿತು. ಅನಂತರ ಉಭಯ ತಂಡಗಳು ಕಳೆದ ವರ್ಷದ ಕಾಮನ್​ವೆಲ್ತ್​ ಗೇಮ್ಸ್‌ನ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆದರೆ ಇಲ್ಲಿಯೂ ಭಾರತ ಸೋಲು ಕಂಡಿತ್ತು. ಇದೀಗ ಅವಳಿ ಸೋಲಿಗೆ ಹರ್ಮನ್​ಪ್ರೀತ್​ ಕೌರ್​ ಪಡೆ ಸೇಡು ತೀರಿಸೀತೇ ಎಂದು ಕಾದು ನೋಡಬೇಕಿದೆ.

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ, ಸಾಮಾನ್ಯ ಮಟ್ಟದ ಬೌಲಿಂಗ್‌ ಭಾರತದ ಪಾಲಿನ ದೊಡ್ಡ ಸಮಸ್ಯೆಗಳಾಗಿವೆ. ಪವರ್‌ ಪ್ಲೇ ಅವಧಿಯಲ್ಲಿ ನಿರೀಕ್ಷಿತ ರನ್‌ ಪೇರಿಸಲು ಕೌರ್‌ ಬಳಗ ವಿಫ‌ಲವಾಗುತ್ತಿದೆ. ಮಂಧಾನಾ ತಂಡವನ್ನು ಆಧರಿಸಿ ನಿಂತರೂ ಶಫಾಲಿ ವರ್ಮ ಸಿಡಿದು ನಿಲ್ಲುತ್ತಿಲ್ಲ. ಮಧ್ಯಮ ಕ್ರಮಾಂಕ ಕೂಡ ಕಳಾಹೀನವಾಗಿದೆ. ಜೆಮಿಮಾ ಪಾಕ್‌ ವಿರುದ್ಧದ ಪಂದ್ಯದಲ್ಲಿ ಆಡಿದ ಬಳಿಕ ಮುಂದಿನ ಯಾವುದೇ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಜತೆಗೆ ನಾಯಕಿ ಹರ್ಮನ್‌ಪ್ರೀತ್‌ ಕೂಡ ದೊಡ್ಡ ಇನಿಂಗ್ಸ್​ ಪೇರಿಸುವಲ್ಲಿ ವಿಫಲರಾಗಿದ್ದಾರೆ.

ಆಸ್ಟ್ರೇಲಿಯಾ ಸಮರ್ಥ ತಂಡ

ಆಸ್ಟ್ರೇಲಿಯದ ಬ್ಯಾಟಿಂಗ್‌ ಮತ್ತು ಬೌಲಿಂಗ್​ ಬಲಿಷ್ಠವಾಗಿದೆ. ಬೆತ್​ ಮೂನಿ, ಪೆರ್ರಿ, ಮೆಗ್​ ಲ್ಯಾನಿಂಗ್‌, ಗಾರ್ಡನರ್‌, ಮೆಕ್‌ಗ್ರಾತ್‌ ಹೀಗೆ ಬಲಿಷ್ಠ ಆಟಗಾರ್ತಿರ ಪಟ್ಟಿಯೇ ಆಸೀಸ್​ ಬಳಗದಲ್ಲಿದೆ. ಇದನ್ನೆಲ್ಲ ಗಮನಿಸುವಾಗ ಹಾಲಿ ಚಾಂಪಿಯನ್‌ ಖ್ಯಾತಿಯ ಆಸ್ಟ್ರೇಲಿಯವೇ ಫೇವರಿಟ್‌ ಆಗಿ ಗೋಚರಿಸುತ್ತಿದೆ. ಒಂದೊಮ್ಮೆ ಭಾರತ ಈ ಸವಾಲನ್ನು ಗೆದ್ದು ಫೈನಲ್​ ಪ್ರವೇಶಿಸಿದರೆ ಈ ಸಲ ಕಪ್ ನಮ್ದೇ ಎನ್ನಲಡ್ಡಿಯಿಲ್ಲ.

Exit mobile version