Site icon Vistara News

World Athletics Championships | ಜಾವೆಲಿನ್‌ ಎಸೆತದಲ್ಲಿ ನೀರಜ್‌ ಛೋಪ್ರಾಗೆ ಬೆಳ್ಳಿಯ ಪದಕ!

neeraj chopra

ಒರೆಗಾನ್ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ನೀರಜ್‌ ಛೋಪ್ರಾ ಭಾರತಕ್ಕೆ ಚೊಚ್ಚಲ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಅಂತಿಮ ಸುತ್ತಿನಲ್ಲಿ ೮೮.೧3 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆತದ ಮೂಲಕ ನೀರಜ್‌ ಛೋಪ್ರಾ ರಜತ ಪದಕವನ್ನು ಗೆದ್ದಿದ್ದಾರೆ.

ಇದರೊಂದಿಗೆ ಒಲಿಂಪಿಕ್‌ ಮತ್ತು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ನೀರಜ್‌ ಛೋಪ್ರಾ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಈ ದಾಖಲೆ ನಿರ್ಮಿಸಿದ ಮೊದಲ ಭಾರತೀಯ ಎನಿಸಿದ್ದಾರೆ. 19 ವರ್ಷಗಳ ಬಳಿಕ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದಂತಾಗಿದೆ.

ಅಂತಿಮ ಫಲಿತಾಂಶ: ಕೆರಿಬಿಯನ್‌ ವಲಯದ ಅಂಡರ್‌ಸನ್ ಪೀಟರ್ಸ್ ಅಂತಿಮ ಸುತ್ತಿನಲ್ಲಿ ೯೦.೫೪ ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವುದರೊಂದಿಗೆ ಚಿನ್ನದ ಪದಕ ಗೆದ್ದರು.‌ ನೀರಜ್‌ ಛೋಪ್ರಾ ೮೮.೧೩ ದೂರಕ್ಕೆ ಎಸೆದು ಬೆಳ್ಳಿಯ ಪದಕ ಹಾಗೂ ಜಾಕೋಬ್‌ ವದ್ಲಿಜ್‌ ೮೮.೦೯ ದೂರಕ್ಕೆ ಎಸೆದು ಕಂಚಿನ ಪದಕ ಗಳಿಸಿದರು.

೧೯ ವರ್ಷಗಳ ಬಳಿಕ ಭಾರತಕ್ಕೆ ಪದಕದ ಸಂಭ್ರಮ

ಸುಬೇದಾರ್‌ ನೀರಜ್‌ ಛೋಪ್ರಾ ೧೯೯೭ರ ಡಿಸೆಂಬರ್‌ ೨೪ರಂದು ಹರಿಯಾಣದ ಖಾಂದ್ರಾದಲ್ಲಿ ಜನಿಸಿದವರು. 2020ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದವರು. ಒಲಿಂಪಿಕ್‌ನಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದ ಭಾರತೀಯರು ಇಬ್ಬರೇ. ಅಭಿನವ್‌ ಬಿಂದ್ರಾ ಹಾಗೂ ನೀರಜ್‌ ಛೋಫ್ರಾ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಇದುವರೆಗೆ ಸಿಕ್ಕಿದ್ದು ೨೦೦೩ರಲ್ಲಿ ಅಂಜು ಬಾಬಿ ಜಾರ್ಜ್ ಅವರು ಲಾಂಗ್ ಜಂಪ್‌ನಲ್ಲಿ ಗಳಿಸಿದ ಕಂಚಿನ ಪದಕ ಮಾತ್ರ. ಆದರೆ ಇದು ಭಾರತೀಯ ಕ್ರೀಡಾ ಇತಿಹಾಸ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಹೀಗಾಗಿ ೧೯ ವರ್ಷಗಳ ಬಳಿಕ ಭಾರತ ಎರಡನೇ ಐತಿಹಾಸಿಕ ಪದಕ ಗೆದ್ದಂತಾಗಿದೆ.

ಮುಖ್ಯಾಂಶಗಳು

Exit mobile version