Site icon Vistara News

World Athletics Championships 2022| ನೀರಜ್‌ ಛೋಪ್ರಾ ಜತೆ ರೋಹಿತ್‌ ಯಾದವ್‌ ಕೂಡ ಫೈನಲ್‌ಗೆ ಎಂಟ್ರಿ!

niraj chopra and rohit yadav

ಒರೆಗಾನ್‌ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್‌ ಛೋಪ್ರಾ ಅವರು ಜಾವೆಲಿನ್‌ನ ಮೊದಲ ಎಸೆತದಲ್ಲಿಯೇ ಫೈನಲ್‌ಗೆ ಲಗ್ಗೆ ಹಾಕಿದ ಬೆನ್ನಲ್ಲೇ, ‌ಭಾರತದ ಮತ್ತೊಬ್ಬ ಜಾವೆಲಿನ್‌ ಕ್ರೀಡಾಪಟು ರೋಹಿತ್‌ ಯಾದವ್‌ ಕೂಡಾ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ವಿಶ್ವ ಅಥ್ಲೆಟಿಕ್ಸ್‌ನ ಜಾವೆಲಿನ್‌ ಸ್ಪರ್ಧೆಯ ಫೈನಲ್‌ಗೆ ಇದೇ ಮೊದಲ ಬಾರಿಗೆ ಇಬ್ಬರು ಭಾರತೀಯರು ಪ್ರವೇಶಿಸಿದಂತಾಗಿದೆ. ಪಂದ್ಯಾವಳಿಯ ನಾನಾ ಸ್ಪರ್ಧೆಗಳಲ್ಲಿ ಫೈನಲ್‌ಗೆ ನೀರಜ್‌ ಛೋಪ್ರಾ ಸೇರಿ ೬ ಮಂದಿ ಈ ಸಲ ಪ್ರವೇಶಿಸಿದ್ದು, ಭಾರತೀಯರ ಸಂಭ್ರಮವನ್ನು ಹೆಚ್ಚಿಸಿದೆ.

ಟೋಕಿಯೊ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌ ಛೋಪ್ರಾ ತಮ್ಮ ಮೊದಲ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ದಾಖಲಿಸಿ ಫೈನಲ್‌ಗೆ ತಲುಪಿದ್ದಾರೆ.‌ ಅರ್ಹತಾ ಸುತ್ತಿನಲ್ಲಿ ೮೮.೩೯ ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದಿದ್ದಾರೆ. ರೋಹಿತ್‌ ಯಾದವ್‌ ಅವರು ೮೦.೪೨ ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದೇ ಭಾನುವಾರ ಬೆಳಗ್ಗೆ ೭.೦೫ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. ಪಾಕಿಸ್ತಾನದ ಕ್ರೀಡಾಪಟು ಅರ್ಶದ್‌ ನದೀಮ್‌ ಕೂಡ ೮೧.೭೧ ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಫೈನಲ್‌ಗೆ ಪ್ರವೇಶಿಸಿದ್ದಾರೆ.

ಟ್ರಿಪ್ಪಲ್‌ ಜಂಪ್:‌ ಭಾರತದ ಎಲ್ಡೋಸ್‌ ಪೌಲ್‌ ಮೊದಲ ಬಾರಿಗೆ ಪುರುಷರ ಟ್ರಿಪ್ಪಲ್‌ ಜಂಪ್‌ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿದ್ದಾರೆ. (೧೬.೬೮ ಮೀಟರ್) ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನ ಈ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದಂತಾಗಿದೆ.

೬ ಮಂದಿ ಫೈನಲ್‌ಗೆ ಲಗ್ಗೆ: ಭಾರತದ ಕ್ರೀಡಾಪಟುಗಳು ಈ ಸಲದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಇದುವರೆಗಿನ ಅಮೋಘ ಪ್ರದರ್ಶನವನ್ನು ದಾಖಲಿಸಿದ್ದಾರೆ. ಇದುವರೆಗೆ ೬ ಮಂದಿ ನಾನಾ ಸ್ಪರ್ಧೆಗಳಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶ್ರೀ ಶಂಕರ್‌ ಅವರಿಗೆ ಫೈನಲ್‌ನಲ್ಲಿ ಪದಕ ಕೈತಪ್ಪಿದೆ. ಉಳಿದ ಐವರ ಫೈನಲ್‌ ಪಂದ್ಯಗಳು ನಡೆಯಲಿದೆ. ವಿವರ ಇಂತಿದೆ

ಭಾರತಕ್ಕೆ ಇದುವರೆಗೆ ಸಿಕ್ಕಿದ್ದು ಒಂದು ಕಂಚಿನ ಪದಕ ಮಾತ್ರ!

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಇದುವರೆಗೆ ಸಿಕ್ಕಿದ್ದು ೨೦೦೩ರಲ್ಲಿ ಅಂಜು ಬಾಬಿ ಜಾರ್ಜ್ ಅವರು ಲಾಂಗ್ ಜಂಪ್‌ನಲ್ಲಿ ಗಳಿಸಿದ ಕಂಚಿನ ಪದಕ ಮಾತ್ರ. ಆದರೆ ಇದು ಭಾರತೀಯ ಕ್ರೀಡಾ ಇತಿಹಾಸ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಹೀಗಾಗಿ ಇದೀಗ ಜಾವೆಲಿನ್‌ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿರುವ ಚಿನ್ನದ ಹುಡುಗ ನೀರಜ್‌ ಛೋಪ್ರಾ ಅವರ ಮೇಲೆ ಇಡೀ ದೇಶದ ಗಮನ ಹರಿದಿದೆ. ಭಾರತಕ್ಕೆ ಕ್ರೀಡಾಕೂಟದ ಇತಿಹಾಸದಲ್ಲೇ ಎರಡನೇ ಪದಕ ತಂದುಕೊಡುತ್ತಾರೆಯೇ ಎಂಬ ಕಾತರ ಹೆಚ್ಚಿದೆ.

Exit mobile version