ಒರೆಗಾನ್ (ಅಮೆರಿಕ) : ಭಾರತದ ಚಿನ್ನದ ಹುಡುಗ, ಒಲಿಂಪಿಕ್‌ನಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್ ಕ್ರೀಡಾಪಟು ನೀರಜ್ ಛೋಪ್ರಾ, ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಮೊದಲ ಎಸೆತದಲ್ಲಿಯೇ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಇದರೊಂದಿಗೆ ಈ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತಕ್ಕೆ ಸ್ವರ್ಣಪದಕ ಗೆಲ್ಲಿಸಿಕೊಡುವ ನಿರೀಕ್ಷೆ ಮೂಡಿಸಿದ್ದಾರೆ. ಮಾತ್ರವಲ್ಲದೆ ಛೋಪ್ರಾ ಈಗ ಅದ್ಭುತ ಪ್ರದರ್ಶನವನ್ನೂ ನೀಡುತ್ತಿದ್ದಾರೆ.
ನೀರಜ್ ಛೋಪ್ರಾ ಅವರು ಅಮೋಘ 88.೩೯ ಮೀಟರ್ ದೂರಕ್ಕೆ ಮೊದಲ ಪ್ರಯತ್ನದಲ್ಲಿಯೇ ಜಾವೆಲಿನ್ ಎಸೆದರು. ೧೦ ಸೆಕೆಂಡ್‌ನಲ್ಲಿ ಜಾವೆಲಿನ ಅನ್ನು ಇಷ್ಟು ದೂರಕ್ಕೆ ಛೋಪ್ರಾ ಎಸೆದರು. ಇದು ಈ ವರ್ಷ ಅವರ ಮೂರನೇ ಅತ್ಯುತ್ತಮ ಎಸೆತವಾಗಿದೆ. ೮೩.೫೦ ಮೀಟರ್ ದೂರಕ್ಕೆ ಎಸೆದರೆ ತನ್ನಿಂತಾನೆ ಫೈನಲ್‌ಗೆ ಸ್ಪರ್ಧಿಸಲು ಅರ್ಹತೆ ಸಿಗುತ್ತದೆ.
ಒಟ್ಟು ೩೨ ಮಂದಿ ಜಾವೆಲಿನ್ ಕ್ರೀಡಾಪಟುಗಳು ಕಣದಲ್ಲಿದ್ದರು. ಛೋಪ್ರಾ ಅವರು ೮೯.೯೪ ಮೀಟರ್ ದೂರಕ್ಕೆ ಎಸೆದಿರುವ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಭಾರತದ ಮತ್ತೊಬ್ಬ ಜಾವೆಲಿನ್ ಕ್ರೀಡಾಪಟು ರೋಹಿತ್ ಯಾದವ್ ಕೂಡ ಅರ್ಹತಾ ಸುತ್ತಿನಲ್ಲಿ ಭಾಗವಹಿಸುತ್ತಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನ ಇತಿಹಾಸದಲ್ಲಿ ಭಾರತಕ್ಕೆ ಎರಡನೇ ಪದಕವನ್ನು ನೀರಜ್ ಛೋಪ್ರಾ ಅವರು ತಂದುಕೊಡುವ ವಿಶ್ವಾಸ ಉಂಟಾಗಿದ್ದು, ಭಾರತೀಯರು ಕಾತರದಿಂದ ನಿರೀಕ್ಷಿಸುವಂತಾಗಿದೆ. ಈ ಹಿಂದೆ ಅಂಜು ಬಾಬಿ ಜಾರ್ಜ್ ಅವರು ೨೦೦೩ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಪಂದ್ಯಾವಳಿಯ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಜುಲೈ ೨೪ಕ್ಕೆ ಫೈನಲ್: ಅಂತಿಮ ಹಣಾಹಣಿ ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ 7.05ಕ್ಕೆ ನಡೆಯಲಿದೆ.