ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಭಾರತಕ್ಕೆ ೧೮ ನೇ ಬಂಗಾರದ ಪದಕ ತಂದುಕೊಟ್ಟಿರುವ ಮಹಿಳಾ ಬಾಕ್ಸರ್ ನಿಖತ್ ಜರೀನ್ ಅಂಕಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರುವಂತೆ ಮಾಡಿದ್ದಾರೆ. ಇದು ಹಾಲಿ ಕಾಮನ್ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಬಂಗಾರದ ಪದಕವಾಗಿದೆ. ಅಂತೆಯೇ ಫೈನಲ್‌ಗೇರಿದ್ದ ನಾಲ್ಕು ಬಾಕ್ಸರ್‌ಗಳಲ್ಲಿ ಮೂವರು ಸ್ವರ್ಣ ಪದಕವನ್ನೇ ಬಾಚಿಕೊಂಡಂತಾಗಿದೆ.
ಭಾನುವಾರ ಸಂಜೆಯ ವೇಳೆ (ಭಾರತೀಯ ಕಾಲಮಾನ) ನಡೆದ ೫೦ ಕೆ.ಜಿ ವಿಭಾಗದಲ್ಲಿ ಅವರು ಉತ್ತರ ಐರ್ಲೆಂಡ್‌ನ ಕಾರ್ಲಿ ಎಮ್‌ಸಿ ನೌಲ್ ವಿರುದ್ಧ ಸಂಪೂರ್ಣ ಪಾರಮ್ಯ ಸಾಧಿಸಿ ೫-೦ ಅಂತರದ ಗೆಲುವು ಸಾಧಿಸಿದರು. ನಿಖತ್ ಅವರು ಕೆಲವು ತಿಂಗಳ ಹಿಂದೆ ವಿಶ್ವ ಚಾಂಪಿಯನ್‌ಷಿಪ್ ಗೆಲ್ಲುವ ಮೂಲಕ ತಮ್ಮ ಭುಜಬಲವನ್ನು ಪ್ರದರ್ಶಿಸಿದ್ದ ಹೈದರಾಬಾದ್ ಮೂಲದ ಬಾಕ್ಸರ್ ಇದೀಗ ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್ ಪದಕವನ್ನೂ ತಮ್ಮದಾಗಿಸಿಕೊಂಡರು.
ಆರಂಭದಿಂದಲೇ ಆಕ್ರಮಕಾರಿ ಪ್ರದರ್ಶನ ತೋರಿದ ನಿಖತ್ ಜರಿನ್ ಅವರು ಎದುರಾಳಿ ಬಾಕ್ಸರ್‌ಗೆ ಅಂಕಗಳನ್ನು ಗಳಿಸಲುಅವಕಾಶವೇ ನೀಡಲಿಲ್ಲ. ಆದರೆ ಎರಡನೆ ಸುತ್ತಿನಲ್ಲಿನಲ್ಲಿ ಉತ್ತರ ಐರ್ಲೆಂಡ್‌ನ ಸ್ಪರ್ಧಿ ಉತ್ತಮ ಪ್ರದರ್ಶನ ತೊರಿದರೂ ಅಷ್ಟರಲ್ಲೇ ಭಾರತ ಬಾಕ್ಸರ್ ಸಾಕಷ್ಟು ಮುನ್ನಡೆ ಗಳಿಸಿಕೊಂಡಿದ್ದರು. ಹೀಗಾಗಿ ಮೂರನೇ ಸುತ್ತಿನಲ್ಲೂ ವಿಶ್ವಾಸ ಹೆಚ್ಚಿಸಿಕೊಂಡು ಪಂಚ್ ಕೊಟ್ಟ ನಿಖತ್ ಎದುರಾಳಿ ನಿರುತ್ತರರಾಗುವಂತೆ ನೋಡಿಕೊಂಡರು.
ಭರ್ಜರಿ ಪ್ರದರ್ಶನ
ನಿಖತ್ ಅವರು ಹಾಲಿ ಆವೃತ್ತಿಯ ಆರಂಭದಿಂದಲೇ ಅಬ್ಬರದ ಪ್ರದರ್ಶನ ನೀಡಿದ್ದರು. ೧೬ನೇ ಸುತ್ತಿನ ಸ್ಪರ್ಧೆಯಲ್ಲಿ ಮೊಜಾಂಬಿಕ್‌ನ ವರು ೫-೦ ಅಂತರದಿಂದ ಗೆದ್ದಿದ್ದರು. ಅಲ್ಲದೆ, ನಿಖತ್ ಕೊಡುತ್ತಿದ್ದ ಪಂಚ್‌ಗೆ ಎದುರಾಳಿ ಘಾಸಿಗೊಳ್ಳುತ್ತಿರುವುದನ್ನು ಗಮನಿಸಿದ್ದ ರೆಫರಿ ಮೂರನೇ ಸುತ್ತಿನ ಹೋರಾಟವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಳೂ ವೇಲ್ಸ್ ದೇಶದ ಸ್ಪರ್ಧಿಯ ವಿರುದ್ಧವೂ ೫-೦ ಅಂತರದ ಗೆಲುವು ಸಾಧಿಸಿದ್ದರು. ಅಂತೆಯೇ ಸೆಮಿ ಫೈನಲ್‌ನಲ್ಲಿಯೂ ಅವರು ಇಂಗ್ಲೆಂಡ್‌ನ ಬಾಕ್ಸರ್ ವಿರುದ್ಧವೂ ೫-೦ ಅಂತರದ ಜಯ ತಮ್ಮದಾಗಿಸಿಕೊಂಡಿದ್ದರು. ಇದೀಗ ಫೈನಲ್‌ನಲ್ಲೂ ೫-೦ ಜಯ ದಾಖಲಸಿದ್ದಾರೆ.
ಇದನ್ನೂ ಓದಿ | CWG- 2022 | ನೀತೂ ಗಂಗಾಸ್ ಪಂಚ್‌ಗೆ ಒಲಿದ ಬಂಗಾರದ ಪದಕ