Site icon Vistara News

World Championships: ಫೈನಲ್​ಗೆ ಲಗ್ಗೆಯಿಟ್ಟು ಪ್ಯಾರಿಸ್​ ಒಲಿಂಪಿಕ್​ಗೆ ಅರ್ಹತೆ ಪಡೆದ ನೀರಜ್​ ಚೋಪ್ರಾ

Massive first throw of 88.77m

ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 88.77 ಮೀ. ದೂರ ಜಾವೆಲಿನ್​ ಎಸೆದು(Javelin Throw) ಫೈನಲ್​ ಪ್ರವೇಶಿಸಿದ್ದಾರೆ. ಜತೆಗೆ ಪ್ಯಾರಿಸ್​ ಒಲಿಂಪಿಕ್ಸ್​ಗೂ(Paris Olympics) ಅರ್ಹತೆ ಪಡೆದಿದ್ದಾರೆ.

ಶುಕ್ರವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗುಂಪು A ಕ್ವಾಲಿಫೈಯರ್‌ನಲ್ಲಿ ಕಣಕ್ಕಿಳಿದ ನೀರಜ್​ ಈ ವರ್ಷದ ಉತ್ತಮ 88.77 ಮೀ. ದೂರ ಜಾವೆಲಿನ್ ಎಸೆದು ಫೈನಲ್​ಗೆ ಲಗ್ಗೆಯಿಟ್ಟರು. ಫೈನಲ್‌ ಪ್ರವೇಶಿಸಲು 83.00 ಮೀ. ಅರ್ಹತಾ ಅಂಕ ಮಾನದಂಡವಾಗಿತ್ತು. ಆದರೆ ಇದಕ್ಕಿಂತಲೂ ಹೆಚ್ಚಿನ ದೂರ ಎಸೆದ ನೀರಜ್​ ನೇರವಾಗಿ ಫೈನಲ್​ ಟಿಕೆಟ್​ ಪಡೆದರು. ಒಟ್ಟು 27 ಜಾವೆಲಿನ್ ಎಸೆತಗಾರರನ್ನು ಎ ಮತ್ತು ಬಿ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಆಯ್ಕೆಯಾಗುವ 12 ಮಂದಿ ಭಾನುವಾರದಂದು ನಿಗದಿಯಾಗಿರುವ ಫೈನಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಮೊದಲ ಪ್ರಯತ್ನದಲ್ಲೇ ಯಶಸ್ಸು

ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲೇ 88.77 ಮೀಟರ್ ಜಾವೆಲಿನ್ ಎಸೆದು ಯಶಸ್ಸು ಕಂಡರು. ಇದರ ಜತೆಗೆ 83 ಮೀ. ಅರ್ಹತಾ ಮಾರ್ಕ್ ದಾಟಿದ ಏಕೈಕ ಎಸೆತಗಾರನಾಗಿ ಮೂಡಿ ಬಂದರು. ಜರ್ಮನಿಯ ಜೂಲಿಯನ್ ವೆಬರ್ 82.39 ಮೀಟರ್ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಭಾರತದ ಮತ್ತೋರ್ವ ಸ್ಪರ್ಧಿ ಡಿ.ಪಿ ಮನು ಅವರು 81.31 ಮೀ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು. ಆದರೆ ಮನು ಅವರ ಅರ್ಹತೆಯನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಬಿ ಗುಂಪಿನಲ್ಲಿರುವ ಕಿಶೋರ್ ಜೆನಾ ಅವರ ಫಲಿತಾಂಶವನ್ನು ಪರಿಗಣಿಸಿ ಬಳಿಕ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ.

ಪ್ಯಾರಿಸ್​ ಒಲಿಂಪಿಕ್ಸ್​ಗೂ ಅರ್ಹತೆ ಪಡೆದ ನೀರಜ್​

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾ ಅವರು ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್​ ಪ್ರವೇಶಿಸುತ್ತಿದ್ದಂತೆ ಮುಂದಿನ ವರ್ಷ ಪ್ಯಾರಿಸ್​ ಒಲಿಂಪಿಕ್ಸ್​ ಕೂಟಕ್ಕೂ ಅರ್ಹತೆ ಪಡೆದರು. ಕಳೆದ ವರ್ಷ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು. ಈ ಟೂರ್ನಿಯಲ್ಲಿ ಭಾರತ ಕೇವಲ ಎರಡು ಪದಕ ಮಾತ್ರ ಗೆದ್ದಿದೆ. 2003ರ ಪ್ಯಾರಿಸ್‌ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಮೊದಲ ಪದಕ ಪಡೆದಿದ್ದರು. ಇದಾದ ಬಳಿಕ ಕಳೆದ ವರ್ಷ ನೀರಜ್​ ಅವರು ದ್ವಿತೀಯ ಪದಕ ಗೆದ್ದಿದ್ದರು.

ಇದನ್ನೂ ಓದಿ World Athletics Championships; ಇಂದು ನೀರಜ್​ ಚೋಪ್ರಾ ಕಣಕ್ಕೆ

ಫೈನಲ್​ನಲ್ಲಿ 90 ಮೀ. ಗುರಿ

ಲಾಸನ್​ನಲ್ಲಿ ಕಳೆದ ವರ್ಷ ನಡೆದ ಡೈಮಂಡ್​ ಲೀಗ್​ನಲ್ಲಿ ಚೋಪ್ರಾ 89.04 ದೂರ ಜಾವೆಲಿನ್‌ ಎಸೆದಿದ್ದರು. ಇದು ಅವರ ಇದುವರೆಗೆ ಅತ್ಯುತ್ತಮ ಸಾಧನೆಯಾಗಿದೆ. ಭಾನುವಾರ ನಡೆಯುವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ 90 ಮೀ.ದೂರ ಎಸೆಯುವುದು ನನ್ನ ಪ್ರಮುಖ ಗುರಿ ಎಂದು ಹೇಳಿದ್ದಾರೆ. ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೇ 29ರಂದು ನೆದರ್ಲೆಂರ್ಡ್ಸ್​ನಲ್ಲಿ ನಡೆದಿದ್ದ ಎಫ್ಬಿಕೆ ಗೇಮ್ಸ್‌ ಮತ್ತು ಜೂನ್​ 13ರಂದು ಫಿನ್​ಲೆಂಡ್‌ನ‌ಲ್ಲಿ ನಡೆದ ಪಾವೋ ನುರ್ಮಿ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಜುಲೈನಲ್ಲಿ ನಡೆದ ಲೌಸನ್ನೆ ಚರಣರದ ಡೈಮಂಡ್​ ಲೀಗ್​ನಲ್ಲಿ(Lausanne Diamond League) ಚಿನ್ನ ಗೆದ್ದಿದ್ದರು.

Exit mobile version