Site icon Vistara News

World Championships: ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದ ನೀರಜ್​ ಚೋಪ್ರಾ; ಕನ್ನಡಿಗ ಮನುಗೆ 6ನೇ ಸ್ಥಾನ

neeraj chopra World Championships

ಬುಡಾಪೆಸ್ಟ್ (ಹಂಗೇರಿ): ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಚಿನ್ನದ ಪದಕ್ಕೆ ಗುರಿ ಇಟ್ಟಿದ್ದಾರೆ. 88.17 ಮೀ. ದೂರ ಜಾವೆಲಿನ್​ ಎಸೆದು(Javelin Throw) ಚೊಚ್ಚಲ ಮತ್ತು ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದರು. ಇದುವರೆಗೆ ದೇಶದ ಇತರ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದಿಂದ ಮಂಕು ಕವಿದಿದ್ದ ಭಾರತೀಯ ಪಾಳೆಯದಲ್ಲಿ ನೀರಜ್​ ಅವರ ಸಾಧನೆ ನವೋಲ್ಲಾಸ ಮೂಡಿಸಿದೆ.

ಕನ್ನಡಿಗ ಡಿ. ಮನು(84.14 ಮೀ.) 6ನೇ ಸ್ಥಾನ ಪಡೆದರೆ, ಮತ್ತೋರ್ವ ಭಾರತೀಯ ಜೇನಾ(84.77 ಮೀ.) 5ನೇ ಸ್ಥಾನಿಯಾದರು. ಪಾಕಿಸ್ತಾನದ ಅರ್ಷದ್ ನದೀಮ್(87.82 ಮೀ) ಬೆಳ್ಳಿ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್(86.67 ಮೀ) ಕಂಚಿನ ಪದಕ ಗೆದ್ದರು. ಜರ್ಮನಿಯ ಬಲಿಷ್ಠ ಆಟಗಾರ ಜೂಲಿಯನ್ ವೆಬರ್(85.79 ಮೀ) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮೊದಲ ಎಸೆತ ಫೌಲ್​

ನೀರಜ್ ಮಾತ್ರವಲ್ಲದೆ ಭಾರತದ ಇನ್ನಿಬ್ಬರು ಜಾವೆಲೆನ್​ ಎಸೆತಗಾರರಾದ ಕನ್ನಡಿಗ ಡಿಪಿ ಮನು ಮತ್ತು ಕಿಶೋರ್ ಜೆನಾ ಕೂಡ ಫೈನಲ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ನೀರಜ್​ ಅವರು ಎಸೆದ ಮೊದಲ ಎಸೆತ ಫೌಲ್​ ಆಗಿತ್ತು. ಆದರೆ ಫಿನಿಕ್ಸ್​ನಂತೆ ಎದ್ದು ಬಂದ ಅವರು ದ್ವಿತೀಯ ಎಸೆತದಲ್ಲಿ 88.17 ಮೀ. ಎಸೆದು ಮೇಲುಗೈ ಸಾಧಿಸಿದರು. ಇವರೊಂದಿಗೆ ಮತ್ತೋರ್ವ ಭಾರತೀಯ ಕಿಶೋರ್‌ ಜೇನಾ ದ್ವಿತೀಯ ಪ್ರಯತ್ನದಲ್ಲಿ 82.82 ಮೀ. ಎಸೆದು ಪದಕ ರೇಸ್​ನಲ್ಲಿ ವಿಶ್ವಾಸ ಮೂಡಿಸಿದರು. ಇದರ ಬೆನ್ನಿಗೆ ಕನ್ನಡಿಗ ಮನು 84.14 ಮೀ. ಎಸೆದು ಬರವಸೆ ಮೂಡಿಸಿದರು. ನಾಲ್ಕನೇ ಎಸೆತದಲ್ಲಿ ಮತ್ತೆ ಪುಟಿದೆದ್ದ ಜೇನಾ 84.77 ಮೀ. ಸಾಧನೆಯೊಂದಿಗೆ 5ನೇ ಸ್ಥಾನ ಪಡೆದರು.

ನೀರಜ್ ಮಾತ್ರವಲ್ಲದೆ ಭಾರತದ ಇನ್ನಿಬ್ಬರು ಜಾವೆಲೆನ್​ ಎಸೆತಗಾರರಾದ ಕನ್ನಡಿಗ ಡಿಪಿ ಮನು ಮತ್ತು ಕಿಶೋರ್ ಜೆನಾ ಕೂಡ ಫೈನಲ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಮೂಲಕ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಫೈನಲ್​ನಲ್ಲಿ ಮೂವರು ಭಾರತೀಯರು ಸ್ಪರ್ಧಿಸಿದ ಇತಿಹಾಸ ಬರೆದರು. ಡಿ.ಪಿ.ಮನು (81.31 ಮೀ.) ಮತ್ತು ಕಿಶೋರ್‌ ಜೇನಾ (80.55 ಮೀ.) ಅರ್ಹತಾ ಸುತ್ತಿನಲ್ಲಿ ಈ ಪ್ರದರ್ಶನ ತೋರಿ ಫೈನಲ್​ಗೆ ಪ್ರವೇಶ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಇದಕ್ಕಿಂತ ಉತ್ತಮ ಪ್ರದರ್ಶನ ತೋರಿದರೂ ಪದಕ ಗೆಲ್ಲುವಲ್ಲಿ ಯಶಸ್ಸು ಕಾಣಲಿಲ್ಲ.

ಪಾಕ್​ ಆಟಗಾರನಿಂದ ತೀವ್ರ ಪೈಪೋಟಿ

ಟೋಕಿಯೊ 2020ರ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್, ಪಾಕಿಸ್ತಾನದ ಅರ್ಷದ್ ನದೀಮ್, ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಕಣದಲ್ಲಿದ್ದ ಬಲಿಷ್ಠ ಆಟಗಾರರಾಗಿದ್ದರು. ಆದರೆ ಈ ಫೈನಲ್​ ಪಂದ್ಯವನ್ನು ಬ್ಯಾಟಲ್​ ಆಫ್​ ನೀರಜ್​ ವರ್ಸಸ್​ ನದೀಮ್​​ ಎಂದು ಕರೆಯಲಾಗಿತ್ತು. ಏಕೆಂದರೆ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್‌ ಕೂಟದಲ್ಲಿ ನದೀಮ್‌ 90.18 ಮೀ. ಜಾವೆಲಿನ್‌ ಎಸೆದು ಚಿನ್ನ ಗೆದ್ದಿದ್ದರು. ಹೀಗಾಗಿ ಅವರಿಂದ ನೀರಜ್​ಗೆ ಭಾರಿ ಪೈಪೋಟಿಯೊಂದನ್ನು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ನದೀಮ್ ಮೂರನೇ ಪ್ರಯತ್ನದಲ್ಲಿ 87.82 ಮೀ. ದೂರ ಎಸೆದು ಹೋರಾಟ ಜಾರಿಯಲ್ಲಿರಿಸಿದರು. ಆದರೆ ನೀರಜ್​ ಅವರ ಗುರಿಯನ್ನು ಮುಟ್ಟಲು ಸಾಧ್ಯವಾಗದೆ ದ್ವಿತೀಯ ಸ್ಥಾನ ಪಡೆದರು. ಚೋಪ್ರಾ 2018ರ ಜಕಾರ್ತಾ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಾಗ ನದೀಮ್‌ ಕಂಚಿನ ಪದಕ ಪಡೆದಿದ್ದರು. ಟೋಕಿಯೊ ಒಲಿಂಪಿಕ್ಸ್‌ (2021)ನಲ್ಲಿ ಚೋಪ್ರಾ ಚಾಂಪಿಯನ್ ಆದಾಗ ನದೀಮ್ ಏಳನೇ ಸ್ಥಾನ ಪಡೆದಿದ್ದರು.

ಕಳೆದ ವರ್ಷ ಬೆಳ್ಳಿ

ನೀರಜ್ ಚೋಪ್ರಾ ಈಗಾಗಲೇ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಗೆದ್ದಿದ್ದಾರೆ. ಇದೀಗ ವಿಶ್ವ ಚಾಂಪಿಯನ್​ಶಿಪ್​ನಲ್ಲಿಯೂ ಚಿನ್ನ ಗೆದ್ದು ನಾಲ್ಕು ಪ್ರಮುಖ ಟೂರ್ನಿಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್​ ಎಂಬ ಹಿರಿಮೆಗೆ ಪಾತ್ರರಾದರು.

ಜತೆಗೆ ಡೈಮಂಡ್ ಲೀಗ್​ನಲ್ಲಿಯೂ ಚಿನ್ನದ ಪದಕದಿಂದ ಮಿನುಗಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಚಿನ್ನದ ಪದಕದೊಂದಿಗೆ ಮಿಂಚಿದರು.

ಭಾರತಕ್ಕೆ ಮೊದಲ ಚಿನ್ನದ ಪದಕ

ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಕೇವಲ ಎರಡು ಪದಕ ಮಾತ್ರ ಗೆದ್ದಿತ್ತು. ಇದರಲ್ಲಿ ಒಂದು ಪದಕ ಕಳೆದ ವರ್ಷ ನೀರಜ್​ ಅವರೇ ತಂದುಕೊಟ್ಟಿದ್ದರು. 2003ರ ಪ್ಯಾರಿಸ್‌ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಮೊದಲ ಪದಕ ಪಡೆದಿದ್ದರು. ಅವರು ಕಂಚಿನ ಪದಕ ಗೆದ್ದಿದ್ದರು. ಇದೀಗ ಮತ್ತೆ ನೀರಜ್​ ಪದಕ ಗೆದ್ದು ಈ ಕೂಟದಲ್ಲಿ ಭಾರತದ ಪದಕ ಸಂಖ್ಯೆಯನ್ನು ಮೂರಕ್ಕೆ ಏರಿಸಿದ್ದಾರೆ.

ಇದನ್ನೂ ಓದಿ World Championships: ಫೈನಲ್​ಗೆ ಲಗ್ಗೆಯಿಟ್ಟು ಪ್ಯಾರಿಸ್​ ಒಲಿಂಪಿಕ್​ಗೆ ಅರ್ಹತೆ ಪಡೆದ ನೀರಜ್​ ಚೋಪ್ರಾ

ನೀರಜ್ 2021 ರಲ್ಲಿ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯರಾಗಿದ್ದಾರೆ. ಒಟ್ಟಾರೆಯಾಗಿ, ಈಗ ನಿವೃತ್ತ ಕ್ರೀಡಾ ಶೂಟರ್ ಅಭಿನವ್ ಬಿಂದ್ರಾ ನಂತರ ಚತುರ್ವಾರ್ಷಿಕ ಈವೆಂಟ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ರಾಷ್ಟ್ರದ ಎರಡನೇ ಆಟಗಾರರಾಗಿದ್ದಾರೆ.

ಡೈಮಂಡ್‌ ಲೀಗ್‌ನಲ್ಲಿ ಚಿನ್ನ

ಇದೇ ವರ್ಷದ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೇ 29ರಂದು ನೆದರ್ಲೆಂರ್ಡ್ಸ್​ನಲ್ಲಿ ನಡೆದಿದ್ದ ಎಫ್ಬಿಕೆ ಗೇಮ್ಸ್‌ ಮತ್ತು ಜೂನ್​ 13ರಂದು ಫಿನ್​ಲೆಂಡ್‌ನ‌ಲ್ಲಿ ನಡೆದ ಪಾವೋ ನುರ್ಮಿ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಜುಲೈನಲ್ಲಿ ನಡೆದ ಲೌಸನ್ನೆ ಚರಣರದ ಡೈಮಂಡ್​ ಲೀಗ್​ನಲ್ಲಿ(Lausanne Diamond League) ಚಿನ್ನ ಗೆದ್ದಿದ್ದರು.

ಪಾರುಲ್​ ಚೌಧರಿ ವಿಫಲ

3 ಸಾವಿರ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಓಟಗಾರ್ತಿ ಪಾರುಲ್​ ಚೌಧರಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟರು.

Exit mobile version