Site icon Vistara News

World Cup 2023: ಮೋದಿ ಸ್ಟೇಡಿಯಂನಲ್ಲಿ ಅ.15ರಂದೂ ನಡೆಯಲ್ಲ ಭಾರತ-ಪಾಕ್‌ ಪಂದ್ಯ; ಈ ಬಾರಿ ಹೊಸ ಕಾರಣ

Rohit Sharma And Babar Azam

ಗಾಂಧಿನಗರ: ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್‌ 15ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್‌ (World Cup 2023) ಪಂದ್ಯಕ್ಕೆ ಭಾರತ ಹಾಗೂ ಪಾಕಿಸ್ತಾನ ಮಾತ್ರವಲ್ಲ, ಜಗತ್ತೇ ಕಾಯುತ್ತಿದೆ. ಹೀಗಿರುವಾಗ, ಅಕ್ಟೋಬರ್‌ 15ರಂದು ನಡೆಯಬೇಕಿದ್ದ ಪಂದ್ಯದ ದಿನಾಂಕವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಕ್ರಿಕೆಟ್‌ ಅಭಿಮಾನಿಗಳಿಗೆ ತುಸು ನಿರಾಸೆಯಾದಂತಾಗಿದೆ.

ಭಾರತ ಹಾಗೂ ಪಾಕಿಸ್ತಾನದ ಪಂದ್ಯ ಎಂದರೆ ಅಪಾರ ಕುತೂಹಲ, ನಿರೀಕ್ಷೆ ಹುಟ್ಟಿಸುತ್ತದೆ. ಎರಡೂ ದೇಶಗಳ ಜನ ಚಾತಕಪಕ್ಷಿಯಂತೆ ಪಂದ್ಯಕ್ಕಾಗಿ ಕಾಯುತ್ತಾರೆ. ಎಷ್ಟೇ ದುಬಾರಿ ಮೊತ್ತದ ಟಿಕೆಟ್‌ ಆದರೂ ಖರೀದಿಸಿ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ತೆರಳುತ್ತಾರೆ. ಅದರಲ್ಲೂ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯವು ಹಲವು ಬಾರಿ ಚರ್ಚಿಸಿ, ಮುಂದೂಡಿ ನಿಗದಿಪಡಿಸಲಾಗಿದೆ. ಈಗಾಗಲೇ ಅಹಮದಾಬಾದ್‌ನಲ್ಲಿ ಹೋಟೆಲ್‌ ಕೂಡ ಬುಕ್‌ ಆಗಿವೆ. ಆದರೆ, ಇದರ ಮಧ್ಯೆಯೇ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ಕಾರಣಗಳೇನು?

ಮೂಲಗಳ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಭದ್ರತಾ ಕಾರಣಗಳಿಂದಾಗಿ ದಿನಾಂಕ ಬದಲಿಸಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ದೇಶದ ಗುಪ್ತಚರ ಇಲಾಖೆ ಅಧಿಕಾರಿಗಳು ಬಿಸಿಸಿಐಗೆ ಭದ್ರತೆ ಸಮಸ್ಯೆ ಕುರಿತು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಅಕ್ಟೋಬರ್‌ 15ರಂದು ನವರಾತ್ರಿ ಇರುವುದರಿಂದ ಗುಜರಾತ್‌ನಲ್ಲಿ ಅದ್ಧೂರಿಯಾಗಿ ಹಬ್ಬ ಆಚರಿಸಲಾಗುತ್ತದೆ. ಸಾವಿರಾರು ಜನ ಒಂದೆಡೆ ಸೇರಿ ಹಬ್ಬ ಆಚರಿಸುತ್ತಾರೆ. ಹಾಗಾಗಿ ಕೂಡ ಪಂದ್ಯದ ದಿನಾಂಕ ಬದಲಾವಣೆಯ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ICC World Cup 2023: ವಿಶ್ವಕಪ್​ಗೆ ಬಾಲಿವುಡ್​ ಬಾದ್​ ಷಾ ರಾಯಭಾರಿ; ಆ ಒಂದು ‘ದಿನ’ಕ್ಕೆ ಶತಕೋಟಿ ಮಿಡಿತ

2011 ರ ಆವೃತ್ತಿಯಲ್ಲಿ ಸಹ ಆತಿಥ್ಯ ವಹಿಸಿದ ನಂತರ ಭಾರತವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆ ಆತಿಥ್ಯ ವಹಿಸಲಿದೆ. 2013 ರಲ್ಲಿ ಕೊನೆಯ ಪಂದ್ಯವನ್ನು ಆಡಿದ ನಂತರ ಭಾರತವು 10 ವರ್ಷಗಳ ನಂತರ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯವನ್ನು ಆಡಲಿದೆ. ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತವೆ, ಆದ್ದರಿಂದ ಅಭಿಮಾನಿಗಳು ಈ ಎರಡು ತಂಡಗಳ ಆಟವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ, ದಿನಾಂಕ ಬದಲಾಗುವ ಕುರಿತು ಚಿಂತನೆ ನಡೆದಿರುವುದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.

Exit mobile version