Site icon Vistara News

World Cup 2023: ಅಕ್ಟೋಬರ್​ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್‌ ಆರಂಭ; ನವೆಂಬರ್​ 19ಕ್ಕೆ ಫೈನಲ್‌!

ICC World Cup 2024

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುವ 2023ರ ಏಕ ದಿನ ವಿಶ್ವಕಪ್(World Cup 2023) ಟೂರ್ನಿ ಅಕ್ಟೋಬರ್​ನಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಫೈನಲ್​ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ(narendra modi cricket stadium) ನಡೆಯಲಿದೆ ಎಂದು ವರದಿಯಾಗಿದೆ. ಆದರೆ ಟೂರ್ನಿಯ ಸ್ಪಷ್ಟ ದಿನಾಂಕವನ್ನು ಇನ್ನೂ ಐಸಿಸಿ(ICC) ಘೋಷಿಸಿಲ್ಲ. ಕೆಲವು ವರದಿಗಳ ಪ್ರಕಾರ ಅಕ್ಟೋಬರ್​ ಮೊದಲ ವಾರದಿಂದ ಟೂರ್ನಿ ಆರಂಭವಾಗಿ ನವೆಂಬರ್​ ಮಧ್ಯದವರೆಗೆ ನಡೆಯುತ್ತದೆ ಎಂದು ಹೇಳಲಾಗಿದೆ.

2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆದಿತ್ತು. ಆದರೆ ಇದು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿ ಜಂಟಿಯಾಗಿ ಆತಿಥ್ಯ ವಹಿಸಿಕೊಂಡಿತ್ತು. ಇದೀಗ 2023ರ ವಿಶ್ವ ಕಪ್​ ಸಂಪೂರ್ಣವಾಗಿ ಭಾರತದದ ಆತಿಥ್ಯದಲ್ಲಿ ನಡೆಯುತ್ತಿದೆ.

ವರದಿಗಳ ಪ್ರಕಾರ, ಅಕ್ಟೋಬರ್​ 5ರಂದು ವಿಶ್ವಕಪ್​ ಆರಂಭವಾಗಲಿದ್ದು, ನವೆಂಬರ್​ 19ಕ್ಕೆ ಅಹಮದಾಬಾದ್​ನಲ್ಲಿ(Ahmedabad) ಫೈನಲ್​ ನಡೆಯಲಿದೆ. ಬಿಸಿಸಿಐ ಈ ಪ್ರತಿಷ್ಠಿತ ಟೂರ್ನಿಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಈ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ.

ಇದನ್ನೂ ಓದಿ World Cup 2023 : ಏಕ ದಿನ ವಿಶ್ವ ಕಪ್​ ಯೋಜನೆ ಬಹಿರಂಗಪಡಿಸಿದ ರಾಹುಲ್​ ದ್ರಾವಿಡ್​

48 ಪಂದ್ಯಗಳು

ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಫೈನಲ್‌ನ ಹೊರತಾಗಿ ಬಿಸಿಸಿಐ ಇನ್ನೂ ಯಾವುದೇ ಪಂದ್ಯಗಳಿಗೆ ನಿರ್ದಿಷ್ಟ ಸ್ಥಳ ಅಥವಾ ತಂಡಗಳು ಅಭ್ಯಾಸ ಮಾಡುವ ನಗರಗಳನ್ನು ಅಂತಿಮಗೊಳಿಸಿಲ್ಲ. ಅಲ್ಲದೇ ಅಕ್ಟೋಬರ್-ನವೆಂಬರ್​ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಇದರ ಬಗ್ಗೆಯೂ ಚಿಂತಿಸಿ ಬಿಸಿಸಿಐ ಅಂತಿಮ ನಿರ್ಧಾರವನ್ನು ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಪ್ರಕಟಿಸುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ವಿಶ್ವ ಆಡಳಿತ ಮಂಡಳಿಯು ಭಾರತ ಸರ್ಕಾರದಿಂದ ಅಗತ್ಯ ಅನುಮತಿ ಪಡೆಯಲು ಬಿಸಿಸಿಐ ವಿಫಲವಾದ ಕಾರಣದಿಂದ ಇದು ವಿಳಂಭಗೊಂಡಿದೆ. ತೆರಿಗೆ ವಿನಾಯಿತಿ ಸೇರಿದಂತೆ ವೀಸಾ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕವೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ ಬಿಸಿಸಿಐ(BCCI) ಈ ಎಲ್ಲ ಸಮಸ್ಯೆಯನ್ನು ಬಗೆಹರಿಸಿದ್ದು, ಭಾರತ ಸರ್ಕಾರದಿಂದ ವರದಿ ಪಡೆದು ಶೀಘ್ರವೇ ಐಸಿಸಿಗೆ ಕೊಡುವುದಾಗಿ ತಿಳಿದುಬಂದಿದೆ.

Exit mobile version