ಬೆಂಗಳೂರು: ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲರಿಯದ ಸರದಾರನಾಗಿ ಮೆರೆದಾಡಿದೆ. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ. ಈ ಬಾರಿಯೂ ಪಾಕ್ನ ಗರ್ವ ಭಂಗ ಮಾಡುವುದರಲ್ಲಿ ಭಾರತ ಯಶಸ್ಸು ಸಾಧಿಸಲಿ ಎನ್ನುವುದು ಶತಕೋಟಿ ಭಾರತೀಯರ ಆಶಯವಾಗಿದೆ.
ಭಾರತ-ಪಾಕ್ ಮೊದಲ ಫೈಟ್
3 ವಿಶ್ವಕಪ್ ಮುಗಿದರೂ ಸಾಂದ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗಿರಲಿಲ್ಲ. ಇದಕ್ಕೆ ಕಾಲ ಕೂಡಿ ಬಂದದ್ದು 1992ರ ಸಿಡ್ನಿಯಲ್ಲಿ ನಡೆದ ಕೂಟದ ಲೀಗ್ ಪಂದ್ಯದಲ್ಲಿ. ಈ ಪಂದ್ಯವನ್ನು ಭಾರತ 43 ರನ್ನುಗಳಿಂದ ಗೆದ್ದು ಬೀಗಿತ್ತು. ಇಲ್ಲಿಂದ ಆರಂಭವಾದ ವಿಜಯದ ದಂಡಯಾತ್ರೆ ಇದುವರೆಗೂ ಅಜೇಯವಾಗಿ ಮುಂದುವರಿದುಕೊಂಡು ಬಂದಿದೆ.
ಭಾರತ ತಂಡದ ಸಾಮರ್ಥ್ಯ ಎಷ್ಟರ ಮಟ್ಟಿಗೆ ಅನಾವರಣಗೊಂಡಿದೆಯೆಂದರೆ, 1992ರಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ವಿಶ್ವ ಚಾಂಪಿಯನ್ ಆದಾಗಲೂ ಭಾರತ ಲೀಗ್ ಹಂತದಲ್ಲಿ ಪಾಕ್ ತಂಡವನ್ನು ಕೆಡವಿತ್ತು. ಸಿಡ್ನಿಯ ಈ ಮುಖಾಮುಖಿಯೇ ಇಂಡೋ-ಪಾಕ್ ತಂಡಗಳ ನಡುವಿನ ಮೊದಲ ವಿಶ್ವಕಪ್ ಪಂದ್ಯವೆಂಬುದು ಉಲ್ಲೇಖನೀಯ.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯ ನಡೆಯುವುದು ಅನುಮಾನ
ಮೊದಲ 4 ವಿಶ್ವಕಪ್ ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ತಂಡಗಳಿಗೆ ಪರಸ್ಪರ ಆಡುವ ಅವಕಾಶವೇ ಸಿಕ್ಕಿರಲಿಲ್ಲ. ಇಂಗ್ಲೆಂಡ್‌ನಲ್ಲಿ ನಡೆದ ಮೊದಲ 3 ಕೂಟಗಳಲ್ಲಿ ಭಾರತ-ಪಾಕ್ ಬೇರೆ ಬೇರೆ ಗ್ರೂಪ್ ಗಳಲ್ಲಿದ್ದವು. ಹೀಗಾಗಿ ಇದು ಸಾಧ್ಯವಾಗಿರಲಿಲ್ಲ. 1983ರಲ್ಲಿ ಭಾರತ ಚಾಂಪಿಯನ್ ಆದಾಗಲೂ ಪಾಕ್ ಸವಾಲನ್ನು ಎದುರಿಸಿರಲಿಲ್ಲ.
1987ರಲ್ಲಿ ಭಾರತ ಮತ್ತು ಪಾಕ್ ವಿಶ್ವಕಪ್ ಕೂಟದ ಜಂಟಿ ಆತಿಥ್ಯ ವಹಿಸಿದ್ದವು. ಈ ತಂಡಗಳೇ ಕೂಟದ ಫೇವರಿಟ್ ಆಗಿದ್ದವು. ಅಲ್ಲದೆ ಫೈನಲ್‌ನಲ್ಲಿ ಎದುರಾಗಬಹುದೆಂಬ ನಿರೀಕ್ಷೆಯೂ ಬಲವಾಗಿತ್ತು. ಆದರೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಮುಗ್ಗರಿಸಿತ್ತು. 1992ರ ಬಳಿಕ 2007ರ ವಿಶ್ವಕಪ್‌ನಲ್ಲಷ್ಟೇ ಭಾರತ-ಪಾಕಿಸ್ತಾನ ಎದುರಾಗಿರಲಿಲ್ಲ. ಅಲ್ಲಿ ಈ ತಂಡಗಳೆರಡೂ ಲೀಗ್ ಹಂತದಲ್ಲೇ ನಿರ್ಗಮಿಸಿದ್ದವು.
ಇದನ್ನೂ ಓದಿ ‘ಮಂಕಿ’ಯಾದ ಮಿಯಾಂದಾದ್, ಬೆಂಕಿಯಾದ ವೆಂಕಿ; ಇದು ಇಂಡೋ-ಪಾಕ್ ಕದನ ಕತೆ
ದಾಖಲೆಗಳ ಪಟ್ಟಿ
1. ಉಭಯ ತಂಡಗಳು ವಿಶ್ವಕಪ್ ಪಂದ್ಯಗಳಲ್ಲಿ ಭಾರತ 7ಕ್ಕೆ 300 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಇದು 2015 ವಿಶ್ವಕಪ್ ಕೂಟದಲ್ಲಿ ದಾಖಲಾಗಿತ್ತು.
2. ಸಚಿನ್ ತೆಂಡೂಲ್ಕರ್ ಅವರು ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯಗಳಲ್ಲಿ ಮುನ್ನೂರು ಪ್ಲಸ್ ರನ್ ಪೇರಿಸಿದ ಏಕೈಕ ಆಟಗಾರ (313 ರನ್).
3. ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯಗಳಲ್ಲಿ 3 ಶತಕ ದಾಖಲಾಗಿದೆ. 2003ರಲ್ಲಿ ಸಯೀದ್ ಅನ್ವರ್ 101 ರನ್, 2015ರಲ್ಲಿ ಕೊಹ್ಲಿ 107 ರನ್, 2019 ರಲ್ಲಿ ರೋಹಿತ್ ಶರ್ಮ 140 ರನ್ ಬಾರಿಸಿದ್ದಾರೆ.
4. ಇತ್ತಂಡಗಳ ವಿಶ್ವಕಪ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅತೀ ಹೆಚ್ಚು 3 ಅರ್ಧ ಶತಕ ಹೊಡೆದಿದ್ದಾರೆ.
5. ಭಾರತ-ಪಾಕ್ ವಿಶ್ವಕಪ್ ಪಂದ್ಯಗಳಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅತೀ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಹೊಂದಿದ್ದಾರೆ. 8 ವಿಕೆಟ್.
6. ವೆಂಕಟೇಶ್ ಪ್ರಸಾದ್ 1999ರ ಪಂದ್ಯದಲ್ಲಿ 27ಕ್ಕೆ 5 ವಿಕೆಟ್ ಉರುಳಿಸಿದ್ದು ಭಾರತದ ಬೌಲರ್ ಒಬ್ಬರ ಉತ್ತಮ ದಾಖಲೆಯಾಗಿದೆ. 2019ರಲ್ಲಿ ಮೊಹಮ್ಮದ್ ಶಮಿ 4 ವಿಕೆಟ್ ಪಡೆದಿದ್ದರು.
7. ಭಾರತ-ಪಾಕ್ ಪಂದ್ಯಗಳಲ್ಲಿ ಮೂವರು 5 ವಿಕೆಟ್ ಉರುಳಿಸಿದ್ದಾರೆ. ವೆಂಕಟೇಶ್ ಪ್ರಸಾದ್ (27/5, 1999), ವಹಾಬ್ ರಿಯಾಜ್ (46/5, 2011) ಮತ್ತು ಸೊಹೈಲ್ ಖಾನ್ (55/5, 2015).
8. ಭಾರತ-ಪಾಕ್ ಪಂದ್ಯಗಳಲ್ಲಿ ಮಾಜಿ ನಾಯಕ ಮಹೇಂದ್ರ ಸೀಂಗ್ ಧೋನಿ ಅತ್ಯುತ್ತಮ ಸಾಧನೆಗೈದ ವಿಕೆಟ್ ಕೀಪರ್ ಆಗಿದ್ದಾರೆ.
9. ಮಾಜಿ ಆಟಗಾರ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಅತೀ ಹೆಚ್ಚು 5 ಕ್ಯಾಚ್ ಪಡೆದ ಫೀಲ್ಡರ್ ಆಗಿದ್ದಾರೆ.