Site icon Vistara News

World Cup History: ಬೌಂಡರಿ ಆಧಾರದಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌

2019 world cup final

ಬೆಂಗಳೂರು: ಅನುಮಾನವೇ ಇಲ್ಲ, 2019ರಲ್ಲಿ ಲಂಡನ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ(World Cup History) ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ನಡುವೆ ಯಾರೇ ಗೆದ್ದರೂ ಅಲ್ಲಿ ಇತಿಹಾಸ ನಿರ್ಮಾಣವಾಗುತ್ತಿತ್ತು. ಯಾರೇ ಕಪ್‌ ಎತ್ತಿದರೂ ಕ್ರಿಕೆಟ್‌ ಜಗತ್ತು ಸಂಭ್ರ ಮಿಸುತ್ತಿತ್ತು. ಇಂಗ್ಲೆಂಡ್‌ ಇಡೀ ಜಗತ್ತಿಗೆ ಕ್ರಿಕೆಟ್‌ ಕಲಿಸಿ ಗುರುವಿನ ಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್‌ “ಜೀರೋ ಎನಿಮಿ’ಯನ್ನು ಹೊಂದಿರುವ ತಣ್ಣಗಿನ ತಂಡವಾಗಿತ್ತು. ಆದರೆ ಅಚ್ಚರಿಯ ನಿಯಮದ ಲಾಭ ಪಡೆದ ಇಂಗ್ಲೆಂಡ್‌ ಕೊನೆಗೂ ವಿಶ್ವ ಚಾಂಪಿಯನ್‌ ಆಗಿ ಶಾಪ ವಿಮೋಚನೆ ಮಾಡಿಕೊಂಡಿತ್ತು. ನ್ಯೂಜಿಲ್ಯಾಂಡ್‌ ಸತತ ಎರಡೂ ಫೈನಲ್‌ಗ‌ಳಲ್ಲಿ ಎಡವಿ ಕಣ್ಣೀರಿಟ್ಟಿದ್ದು ಎಲ್ಲರಿಗೂ ಬೇಸರ ತರಿಸಿತು. 12ನೇ ಆವೃತ್ತಿಯ ವಿಶ್ವಕಪ್‌ ವಿವಾದದಿಂದಲೇ ಸುದ್ದಿಯಾಗಿದ್ದು ಹೆಚ್ಚು. ಈ ವಿಶ್ವಕಪ್‌ ಟೂನಿಯ ಸಂಪೂರ್ಣ ವಿವರ ಇಲ್ಲಿದೆ.

ರೌಂಡ್‌ ರಾಬಿನ್‌ ಲೀಗ್‌

5ನೇ ಬಾರಿ ಇಂಗ್ಲೆಂಡ್‌ ಆತಿಥ್ಯ ವಹಿಸಿಕೊಂಡ ಈ ಟೂನಿಯಲ್ಲಿ 10 ತಂಡಗಳು ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಸೆಣಸಾಡಿದ್ದು. ಅಗ್ರಸ್ಥಾನ ಅಲಂಕರಿಸಿದ 4 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಸೆಮಿಫೈನಲ್‌ನಲ್ಲಿ ಆಡಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ-ನ್ಯೂಜಿಲ್ಯಾಂಡ್‌ ಎದುರಾದವು. ಮಳೆಯಿಂದಾಗಿ ಪಂದ್ಯ ಮೀಸಲು ದಿನ ಮುಂದುವರಿಯಿತು. 240 ರನ್‌ ಬೆನ್ನಟ್ಟಿದ ಭಾರತ 18 ರನ್ನುಗಳ ಸೋಲನುಭವಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್‌ಗೆ ನೆಗೆಯಿತು.


ಆರ್ಮಿ ಗ್ಲೌಸ್‌ ವಿವಾದ

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಯೋಧರ ಬಲಿದಾನದ ಲಾಂಛನವನ್ನು ಹೊಂದಿರುವ ಗ್ಲೌಸ್ ಧರಿಸುವ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂಗಣಕ್ಕಿಳಿದದ್ದು ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಧೋನಿ ತಮ್ಮ ಗ್ಲೌಸ್‌ನಿಂದ ಆರ್ಮಿ ಲಾಂಛನವನ್ನು ತೆಗೆಯುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿನಂತಿ ಮಾಡಿತ್ತು. ಧೋನಿ ವಿಶೇಷ ಅರೆಸೇನಾ ಪಡೆಯ ಬಲಿದಾನ ಲಾಂಛನ ಹೊಂದಿರುವ ಗ್ಲವ್ಸ್‌ ಧರಿಸಿದ್ದರು.


ಧೋನಿ ರನೌಟ್​

2019ರ ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯವನ್ನು ಭಾರತೀಯರು ಎಂದೂ ಮರೆಯಲು ಸಾಧ್ಯವಿಲ್ಲ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್‌ 239 ರನ್‌ ಬಾರಿಸಿತು. ಚೇಸಿಂಗ್‌ ನಡೆಸಿದ ಭಾರತ 5 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಈ ವೇಳೆ ಕ್ರೀಸ್‌ ಆಕ್ರಮಿಸಿಕೊಂಡ ಧೋನಿ ಮತ್ತು ಜಡೇಜಾ ಸೇರಿಕೊಂಡು ಇನ್ನಿಂಗ್ಸ್‌ ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಭಾರತ ಗೆಲುವಿನತ್ತ ಮುಖ ಮಾಡಿತ್ತು. ಜಡೇಜಾ ನಿರ್ಗಮನದ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. ಧೋನಿ ಕ್ರೀಸ್‌ನಲ್ಲಿರುವವರೆಗೆ ಭಾರತಕ್ಕೆ ಗೆಲುವು ಖಚಿತ ಎಂದು ಎಲ್ಲರು ನಂಬಿದ್ದರು. ಆದರೆ 49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದ ಬೆನ್ನಲ್ಲೇ ಮಾರ್ಟಿನ್‌ ಗಪ್ಟಿಲ್‌ ಅವರ ಡೈರೆಕ್ಟ್‌ ಥ್ರೋ ಧೋನಿಯನ್ನು ರನೌಟ್‌ ಮಾಡಿತು. ಅಲ್ಲಿಗೆ ಭಾರತದ ಫೈನಲ್‌ ಕನಸು ಕಮರಿ ಹೋಯಿತು. ಧೋನಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್‌ ಕಡೆಗೆ ನಡೆದರು.

ಇದನ್ನೂ ಓದಿ World Cup History: 2011ರ ವಿಶ್ವಕಪ್‌; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…


ಭಾರಿ ವಿವಾದಕ್ಕೆ ಕಾರಣವಾದ ಫೈನಲ್‌

ಕಿವೀಸ್‌ ಮತ್ತು ಇಂಗ್ಲೆಂಡ್‌ ವಿರುದ್ಧ ನಡೆದ ಫೈನಲ್‌ ಪಂದ್ಯ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿಶ್ವಕಪ್‌ ಮುಗಿದರೂ ವಿವಾದ ಮಾತ್ರ ಕೊನೆಗೊಂಡಿರಲಿಲ್ಲ. ಇತ್ತಂಡಗಳ ನಡುವಿನ ಈ ಪಂದ್ಯ ಟೈಯಲ್ಲಿ ಕೊನೆಗೊಂಡಿತು. ಅನಂತರ ಸೂಪರ್‌ ಓವರ್‌ ಕೂಡ ಟೈಗೊಂಡಿತು. ಅಂತಿಮವಾಗಿ ಸೂಪರ್‌ ಓವರ್‌ ಸೇರಿದಂತೆ ಈ ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದ ತಂಡವನ್ನು ಚಾಂಪಿಯನ್‌ ಎಂದು ತೀರ್ಮಾನಿಸಲಾಯಿತು. ಈ ನಿಯಮದಿಂದ ದಿಟ್ಟ ಹೋರಾಟ ನೀಡಿಯೂ ಕಿವೀಸ್‌ ಮತ್ತೊಮ್ಮೆ ಕಪ್‌ ಗೆಲ್ಲುವಲ್ಲಿ ವಿಫಲವಾಯಿತು.

ಇದನ್ನು ಓದಿ World Cup History: 2007ರ ವಿಶ್ವಕಪ್‌; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!


ವಿವಾದಕ್ಕೆ ಪ್ರಮುಖ ಕಾರಣವಾದದ್ದು ಫೈನಲ್‌ನಲ್ಲಿ ಸೂಪರ್‌ ಓವರ್‌ ಕೂಡ ಟೈ ಆದರೆ ಗರಿಷ್ಠ ಬೌಂಡರಿ ಬಾರಿಸಿದ ತಂಡ ಚಾಂಪಿಯನ್‌ ಆಗಲಿದೆ ಎಂಬ ನಿಯಮವನ್ನು ಐಸಿಸಿ ಯಾರಿಗೂ ತಿಳಿದಿರಲಿಲ್ಲ. ಇದನ್ನು ಪ್ರಶ್ನಿಸಿ ಹಲವು ಕ್ರಿಕೆಟ್‌ ಪಂಡಿತರು ಐಸಿಸಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದರು. ಸೂಪರ್‌ ಓವರ್‌ ಟೈ ಆದರೆ, ಮತ್ತೂಂದು ಸೂಪರ್‌ ಓವರ್‌ ಎಸೆಯಬಹುದಿತ್ತು ಅಥವಾ ಫ‌ಲಿತಾಂಶ ಬರುವ ತನಕ ಇದನ್ನು ಮುಂದುವರಿಸಬಹುದಿತ್ತು ಇದೂ ಕೂಡ ಸಾಧ್ಯವಾಗದಿದ್ದಾಗ ಜಂಟಿಯಾಗಿ ಪ್ರಶಸ್ತಿ ಹಂಚಬಹುದಿತ್ತು ಎಂಬುದು ಬಹುತೇಕರ ವಾದವಾಗಿತ್ತು.

6 ರನ್‌ ನೀಡಿದ ಕುಮಾರ ಧರ್ಮಸೇನ

ಫೈನಲ್‌ನಲ್ಲಿ ಅಂಪೈರ್‌ ಕುಮಾರ ಧರ್ಮಸೇನ ಮಾಡಿದ ಎಡವಟ್ಟು ಇನ್ನೊಂದು ಚರ್ಚೆಗೆ ಕಾರಣವಾಗಿತ್ತು. ಪಂದ್ಯದ ಅಂತಿಮ ಓವರ್‌ನಲ್ಲಿ ಓವರ್‌ ತ್ರೋ ಒಂದಕ್ಕೆ ನೀಡಲಾದ 6 ರನ್ನಿನಿಂದ ನ್ಯೂಜಿಲ್ಯಾಂಡಿನ ಗೆಲ್ಲುವ ಅವಕಾಶ ತಪ್ಪಿತ್ತು. ಐಸಿಸಿ ನಿಯಮ 19.8ರಂತೆ, ಎರಡನೇ ರನ್ನಿಗಾಗಿ ಸ್ಟೋಕ್ಸ್‌ ಮತ್ತು ರಶೀದ್‌ ಓಡಿದ್ದನ್ನು ಪರಿಗಣಿಸುವಂತಿಲ್ಲ. ಗಪ್ಟಿಲ್‌ ಚೆಂಡನ್ನು ಎಸೆಯುವ ವೇಳೆ ಆಟಗಾರರಿಬ್ಬರೂ ಎರಡನೇ ರನ್ನಿಗಾಗಿ ಓಟ ಆರಂಭಿಸಿದ್ದರೇ ಹೊರತು ಪರಸ್ಪರ ಗೆರೆ ದಾಟಿರಲಿಲ್ಲ. ಹೀಗಾಗಿ, ಇದಕ್ಕೆ ಒಂದು ರನ್ನಷ್ಟೇ ನೀಡಬೇಕಿತ್ತು ಎನ್ನುತ್ತದೆ ನಿಯಮ. ಆದರೆ ಅವಸರದಲ್ಲಿ ಎಡವಟ್ಟು ಮಾಡಿದ ಫ್ಲೀಲ್ಡ್‌ ಅಂಪೈರ್‌ ಧರ್ಮಸೇನ 6 ರನ್‌ ನೀಡಿಯೇ ಬಿಟ್ಟರು. ಇಂಗ್ಲೆಂಡಿಗೆ ಓವರ್‌ ತ್ರೋ ಸಹಿತ 5 ರನ್‌ ಮಾತ್ರ ಸಿಗಬೇಕಿತ್ತು. 5 ರನ್‌ ಮಾತ್ರ ಸಿಗುತ್ತಿದ್ದರೆ ಪಂದ್ಯದ ಚಿತ್ರಣವೇ ಬದಲಾಗುತ್ತಿತ್ತು.

ಇದನ್ನೂ ಓದಿ World Cup History : ಭಾರತ ಫೈನಲ್​​ನಲ್ಲಿ ಸೋತ 2003 ಆವೃತ್ತಿಯ ಅವಿಸ್ಮರಣೀಯ ಕ್ಷಣಗಳು ಇಲ್ಲಿವೆ


ಸ್ಟೋಕ್ಸ್‌ ಹೋರಾಟಕ್ಕೆ ಒಲಿದ ಗೆಲುವು

ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ತಂಡವು 8 ವಿಕೆಟಿಗೆ 241 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಬೆನ್‌ ಸ್ಟೋಕ್ಸ್‌ ಮತ್ತು ಬಟ್ಲರ್‌ ಅವರ ಪ್ರಚಂಡ ಆಟದಿಂದಾಗಿ ಗೆಲುವಿನತ್ತ ದಾಪುಗಾಲು ಹಾಕಿದ್ದ ಇಂಗ್ಲೆಂಡ್‌ ಕೊನೆ ಹಂತದಲ್ಲಿ ಎಡವಿದ ಕಾರಣ ನಿಗದಿತ 50 ಓವರ್‌ಗಳಲ್ಲಿ 241 ರನ್‌ ಗಳಿಸಿ ಆಲೌಟಾಯಿತು. ಹಾಗಾಗಿ ಫ‌ಲಿತಾಂಶ ನಿರ್ಧಾರಕ್ಕಾಗಿ ಸೂಪರ್‌ ಓವರ್‌ ಅಳವಡಿಸಲಾಯಿತು.

ಇದನ್ನೂ ಓದಿ World Cup History: ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್​

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಎರಡು ಬೌಂಡರಿ ಸಹಿತ 15 ರನ್‌ ಪೇರಿಸಿತು. ಸ್ಟೋಕ್ಸ್‌ 8 ಮತ್ತು ಬಟ್ಲರ್‌ 7 ರನ್‌ ಹೊಡೆದರು. ಇದಕ್ಕೆ ಪ್ರತಿಯಾಗಿ ನ್ಯೂಜಿಲ್ಯಾಂಡಿನ ಮಾರ್ಟಿನ್‌ ಗಪ್ಟಿಲ್ ಮತ್ತು ಜೇಮ್ಸ್‌ ನೀಶಮ್‌ ಬ್ಯಾಟಿಂಗ್‌ ನಡೆಸಿದ್ದರು. ಒಂದು ಸಿಕ್ಸರ್‌ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಒಂದು ಎಸೆತದಲ್ಲಿ ಗೆಲುವಿಗೆ 2 ರನ್‌ ಅಗತ್ಯವಿತ್ತು. ಈ ವೇಳೆ ಗಪ್ಟಿಲ್ ಎರಡನೇ ರನ್ನಿಗಾಗಿ ಓಡುವಾಗ ರನೌಟ್‌ ಆದರು ಸೂಪರ್‌ ಓವರ್‌ ಕೂಡ ಟೈಗೊಂಡಿತು. ಕೊನೆಗೆ ಗರಿಷ್ಠ ಬೌಂಡರಿ ಬಾರಿಸಿದ ಇಂಗ್ಲೆಂಡ್‌ 44 ವಷಗಳ ಬಳಿಕ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿತ್ತು. ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ನ ಗೆಲುವಿನ ಹೀರೊ ಆದರು.

ಇದನ್ನೂ ಓದಿ World Cup History: ವಿಶ್ವಕಪ್​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಆಟಗಾರರು

ರೋಹಿತ್‌ ದಾಖಲೆಯ ಶತಕ

ಪ್ರಸ್ತುತ ಟೀಮ್​ ಇಂಡಿಯಾದ ನಾಯಕನಾಗಿರುವ ರೋಹಿತ್​ ಶರ್ಮ 2019ರಲ್ಲಿ ಲಂಡನ್​ನಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ 5 ಶತಕ ಬಾರಿಸಿ ಒಂದೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದಕ್ಕೂ ಮುನ್ನ ಈ ದಾಖಲೆ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿತ್ತು. ಅವರು 4 ಶತಕ ಬಾರಿಸಿದ್ದರು. ರೋಹಿತ್​ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಬಾರಿಸಿದ್ದರು.


ಎಲ್ಲ ಪಂದ್ಯ ಸೋತ ಅಫಘಾನಿಸ್ತಾನ

ಎರಡನೇ ವಿಶ್ವಕಪ್‌ ಟೂನಿಯಲ್ಲಿ ಆಡಲಿಳಿದಿದ್ದ ಅಫಘಾನಿಸ್ತಾನ ತಂಡ ಆಡಿದ 9 ಪಂದ್ಯಗಳಲ್ಲಿಯೂ ಸೋಲು ಕಂಡಿತ್ತು. ಇದು ವಿಶ್ವಕಪ್‌ನಲ್ಲಿ ತಂಡವೊಂದು ದಾಖಲಿಸಿದ ಅತ್ಯಂತ ಕಳಪೆ ಸಾಧನೆಯಾಗಿತ್ತು. ಇದಕ್ಕೂ ಮುನ್ನ ವಿಶ್ವಕಪ್‌ ಆಡಿದ ಎಲ್ಲ ತಂಡಗಳು ಕನಿಷ್ಠ ಒಂದು ಪಂದ್ಯವನ್ನಾದರು ಗೆದ್ದಿತ್ತು.

Exit mobile version