ಬೆಂಗಳೂರು: ಕ್ರಿಕೆಟ್‌ನಲ್ಲಿ ಅಚ್ಚರಿ,ಅನಿರೀಕ್ಷಿತ, ಅದ್ಭುತ, ಪವಾಡ ಇವೆಲ್ಲವೂ ಏಕಕಾಲದಲ್ಲಿ ಸಂಭವಿಸುತ್ತದೆ ಎನ್ನುವ ಮಾತನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದು 1983ರ(1983 Cricket World Cup) ಪ್ರುಡೆನ್ಶಿಯಲ್ ವಿಶ್ವಕಪ್. ಅಂದು ಯಾರೂ ನಿರೀಕ್ಷಿಸಿರದ, ಯಾರಿಂದಲೂ ಕಲ್ಪಿಸಲೂ ಆಗದ, ವಿಶ್ವ ಕ್ರೀಡಾ ವಲಯವನ್ನೇ ನಿಬ್ಬೆರಗುಗೊಳಿಸಿದ ವಿದ್ಯಮಾನವೊಂದು ಘಟಿಸಿತ್ತು. ಕಪಿಲ್ ದೇವ್ ಸಾರಥ್ಯದ ಭಾರತ ತಂಡ ನೂತನ ವಿಶ್ವ ಚಾಂಪಿಯನ್(World Cup History) ಆಗಿ ಮೂಡಿಬಂದಿತ್ತು!
ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು
1983ರ ಜೂನ್ 25ರಂದು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಭಯಾನಕ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು. ಈ ಗೆಲುವು ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿತು. ಇಂಗ್ಲೆಂಡಿನಲ್ಲೇ ನಡೆದ ಈ ವಿಶ್ವಕಪ್‌ನಲ್ಲಿ ಬಲಿಷ್ಠ ವಿಂಡೀಸ್ ಹ್ಯಾಟ್ರಿಕ್ ಕಪ್ ಗೆಲ್ಲುವ ಹಾದಿಯಲ್ಲಿತ್ತು. ಆದರೆ ಭಾರತ ಲಾರ್ಡ್ಸ್ನಲ್ಲಿ ರಾಜನಾಗಿ ಮೆರೆದಾಡಿತ್ತು. ಫೈನಲ್‌ನಲ್ಲಿ ರಿಚರ್ಡ್ಸ್ ಕ್ಯಾಚ್ ಪಡೆದ ಕಪಿಲ್ ವಿಶ್ವ ಕಪ್ ಎತ್ತಿದಷ್ಟೇ ಸಂಭ್ರಮಿಸಿದರು. ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಅವರು ಭಾರತದ ಈ ಸಾಧನೆಯನ್ನು ಕೊಂಡಾಡಿದ್ದರು.
ಇದನ್ನೂ ಓದಿ World Cup History: ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್
ಮಾತು ಉಳಿಸಿಕೊಂಡ ವಿಸ್ಡನ್’ ಸಂಪಾದಕ
ಹಿಂದಿನೆರಡು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ, ಅದರಲ್ಲೂ 1979ರಲ್ಲಿ ಆಡಿದ್ದ ಮೂರು ಪಂದ್ಯವನ್ನೂ ಸೋತಿದ್ದ ಭಾರತದ ಮೇಲೆ ಯಾರು ನಂಬಿಕೆ ಇರಿಸಿರಲಿಲ್ಲ. ‘ಭಾರತವೊಂದು ಲೆಕ್ಕದ ಭರ್ತಿಯ ತಂಡ, ಇಂತಹ ಕಳಪೆ ತಂಡವನ್ನು ವಿಶ್ವಕಪ್‌ನಲ್ಲಿ ಆಡಿಸುವುದರಲ್ಲಿ ಅರ್ಥವೇ ಇಲ್ಲ. ಒಂದೊಮ್ಮೆ ಭಾರತ ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ’ ಎಂದು ವಿಸ್ಡನ್’ ಸಂಪಾದಕ ಡೇವಿಡ್ ಫ್ರಿತ್ ಸವಾಲು ಹಾಕಿದ್ದರು. ಕೊನೆಗೆ ಅವರು ಹೇಳಿದಂತೆ ಭಾರತ ತಂಡ ಗೆದ್ದ ಬಳಿಕ ತಾವು ಬರೆದ ಲೇಖನವನ್ನು ಎಲ್ಲರ ಮುಂದೆಯೇ ಹರಿದು ನುಂಗಿ ತಮ್ಮ ಮಾತನ್ನು ಉಳಿಸಿಕೊಂಡರು!
ಇದನ್ನೂ ಓದಿ World Cup History: ರೋಚಕ ಫೈನಲ್‌ನಲ್ಲಿ ಗೆದ್ದು ಬೀಗಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದ ವೆಸ್ಟ್ ಇಂಡೀಸ್!
ಭಾರತ ಬಲಿಷ್ಠ ಎಂದಿದ್ದು ಏಕೈಕ ವ್ಯಕ್ತಿ
ಭಾರತದ ಆಲ್‌ರೌಂಡ್ ಪಡೆಯ ಸಾಮರ್ಥ್ಯವನ್ನು ಸೂಕ್ಷ್ಮ ದೃಷ್ಟಿಯಲ್ಲಿ ಗುರುತಿಸಿದ್ದು ಆಸ್ಟ್ರೇಲಿಯಾ ತಂಡದ ನಾಯಕ ಕಿಮ್ ಹ್ಯೂಸ್!, ಕಪಿಲ್ ಪಡೆಯನ್ನು ಯಾವ ಕಾರಣಕ್ಕೂ ಕಡೆಗಣಿಸಬೇಡಿ ಎಂದು ಎಚ್ಚರಿಸಿದ್ದರು. ಅವರ ಮಾತಿನಂತೆ ಭಾರತ ಕಪ್ ಕೂಡ ಗೆದ್ದಿತು.
ಇದನ್ನೂ ಓದಿ World Cup Recap : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್ ಸ್ಟೋರಿ ಇಲ್ಲಿದೆ
ವಿಂಡೀಸ್ಗೆ ಮೊದಲ ಸೋಲು
ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲೇ ವಿಂಡೀಸ್ ತಂಡಕ್ಕೆ 34 ರನ್ನ್ಗಳ ಸೋಲುಣಿಸಿತ್ತು. ಅದು ವಿಂಡೀಸಿಗೆ ವಿಶ್ವಕಪ್‌ನಲ್ಲಿ ಎದುರಾದ ಪ್ರಪ್ರಥಮ ಸೋಲಾಗಿತ್ತು. ಕಪಿಲ್ ಪಡೆ ಅಸಾಮಾನ್ಯ ಸಾಹಸವೊಂದಕ್ಕೆ ಈ ಗೆಲುವು ಮುನ್ನುಡಿ ಬರೆದಿತ್ತು. ಅದರಲ್ಲೂ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದಾಗ ಜಾಗತಿಕ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿತ್ತು.
25 ಸಾವಿರ ಬೋನಸ್
ಭಾರತ ತಂಡ ಫೈನಲ್ ಪ್ರವೇಶ ಪಡೆದದ್ದೇ ತಡ ವಿಶ್ವಕಪ್ ಗೆದ್ದಂತೆ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿತ್ತು. ಇದೇ ಖಷಿಗೆ ಬಿಸಿಸಿಐ ಅಧಿಕಾರಿಗಳೆಲ್ಲ ಸಂಜೆ ಸಭೆ ಸೇರಿ, ತಂಡದ ಸದಸ್ಯರಿಗೆಲ್ಲ 25 ಸಾವಿರ ರೂ. ಬೋನಸ್ ಪ್ರಕಟಿಸಿದ್ದರು. ಅಲ್ಲದೆ ಪಂದ್ಯ ಗೆಲ್ಲದಿದ್ದರೂ ಈ ಹಣ ನೀಡುವುದಾಗಿ ಘೋಷಣೆ ಮಾಡಲಾಗಿತ್ತಂತೆ. ಈ ಮಾತನ್ನು ಅಂದಿನ ವಿಶ್ವಕಪ್ ತಂಡದ ಸದ್ಯರಾಗಿದ್ದ ಶ್ರೀಕಾಂತ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದರು.
ಜಿಂಬಾಬ್ವೆ ವಿರುದ್ಧ ಕಪಿಲ್ ಸುಂಟರಗಾಳಿ…
ಅದು ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯ, ಮೊದಲು ಬ್ಯಾಟಿಂಗ್ ನಡೆಸಿದ ಭಾರತ 17 ರನ್ ಆಗುವಷ್ಟರಲ್ಲಿ 5 ವಿಕೆಟ್ ಉದುರಿಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಸುನೀಲ್ ಗಾವಸ್ಕರ್(0), ಶ್ರೀಕಾಂತ್(0), ಮೊಹಿಂದರ್(5), ಸಂದೀಪ್ ಪಾಟೀಲ್(1) ಮತ್ತು ಯಶ್ಪಾಲ್ ಶರ್ಮ(9) ವಿಕೆಟ್ ಕೈಚೆಲ್ಲಿ ಪೆವಿಲಿಯನ್ ಸೇರಿದ್ದರು. ಕ್ರಿಕೆಟ್ ಶಿಶು ಜಿಂಬಾಬ್ವೆ ಕೈಯಲ್ಲಿ ಭಾರತ ಸೋಲಿನ ಏಟು ತಿನ್ನುವ ಹಾದಿಯಲ್ಲಿತ್ತು. ಎಲ್ಲರೂ ಪಂದ್ಯ ಗೆಲ್ಲುವ ಆಸೆ ಆಸೆ ಬಿಟ್ಟಿದ್ದರು. ಅಲ್ಲದೆ ಎಲ್ಲರ ಮನೆಯಲ್ಲೂ ರೇಡಿಯೋ ಆಫ್ ಆಗಿದ್ದವು! ಆದರೆ ಮತ್ತೆ ರೀಡಿಯೊ ಆನ್ ಆದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು.
ಸಂಕಷ್ಟದಲ್ಲಿದ್ದಾಗ ತಂಡಕ್ಕೆ ನಾಯಕ ಕಪಿಲ್ ದೇವ್ ಸುಂಟರಗಾಳಿಯ ಬ್ಯಾಟಿಂಗ್ ನಡೆಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. 138 ಎಸೆತಗಳಿಂದ ಅಜೇಯ 175 ರನ್ ಬಾರಿಸಿದರು. ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ವೇಳೆ 16 ಬೌಂಡರಿ, 6 ಸಿಕ್ಸರ್ ಸಿಡಿಯಿತು. ಇವರಿಗೆ ಮತ್ತೊಂದು ತುದಿಯಲ್ಲಿ ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ ಅಮೋಘ ಬೆಂಲವಿತ್ತರು. ಕಿರ್ಮಾನಿ ಅಜೇಯ 24 ರನ್ ಬಾರಿಸಿದರು. ಭಾರತ 8 ವಿಕೆಟ್ಗೆ 266 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ 235ರನ್ಗೆ ಸರ್ವಪತನ ಕಂಡಿತು. ಭಾರತ ಪರ ಮಧನ್ ಲಾಲ್ 3 ವಿಕೆಟ್ ಕೆಡವಿದರು.
ಇದನ್ನೂ ಓದಿ ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ ಕನಸೊಂದು ಸಾಕಾರಗೊಂಡದ್ದು 2011ರ ವಿಶ್ವಕಪ್‌ನಲ್ಲಿ…
ಕಪಿಲ್ ಬ್ಯಾಟಿಂಗ್ ಕೇವಲ ಕಲ್ಪನೆ ಮಾತ್ರ
ಕಪಿಲ್ ಅವರ ಈ ಬ್ಯಾಟಿಂಗ್ ಎಲ್ಲಡೆ ಸುದ್ದಿಯಾಯಿತು. ಇದು ಭಾರತದ ಏಕದಿನ ಇತಿಹಾಸದ ಪ್ರಪ್ರಥಮ ಶತಕವಾಗಿತ್ತು, ಮತ್ತು ಆ ಕಾಲಕ್ಕೆ ವಿಶ್ವ ದಾಖಲೆಯ ಗೌರವ ಪಡೆದಿತ್ತು. ಆದರೆ ಈ ದೃಶ್ಯಾವಳಿ ಭಾರತೀಯರಿಗೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಕೇವಲ ಕಲ್ಪನೆ ಮಾತ್ರ. ಏಕೆಂದರೆ ಒಂದೇ ದಿನ 4 ಪಂದ್ಯ ಇದ್ದ ಕಾರಣ ಬಿಬಿಸಿ ಅಷ್ಟಾಗಿ ಈ ಪಂದ್ಯಕ್ಕೆ ಮಹತ್ವ ನೀಡದೆ ಇದನ್ನು ಚಿತ್ರೀಕರಣ ಮಾಡಿಲ್ಲ. ರೇಡಿಯೋ ಮೂಲಕ ಕೇಳಿದ ಕಾಮೆಂಟ್ರಿ ಮಾತ್ರ ಇಂದಿಗೂ ನೆನಪಾಗಿಯೇ ಉಳಿದಿದೆ.