ಲಕ್ನೋ: ಅಫಘಾನಿಸ್ತಾನ ತಂಡ ನೆದರ್ಲೆಂಡ್ಸ್(Netherlands vs Afghanistan) ವಿರುದ್ಧ 7 ವಿಕೆಟ್ಗಳಿಂದ ಗೆಲುವು ದಾಖಲಿಸಿ ವಿಶ್ವಕಪ್ ಅಂಕಪಟ್ಟಿಯಲ್ಲಿ(World Cup Points Table) 5ನೇ ಸ್ಥಾನಕ್ಕೇರಿದೆ. ಇದಕ್ಕೂ ಮುನ್ನ 5ನೇ ಸ್ಥಾನದಲ್ಲಿದ್ದ ಭಾರತದ ಬದ್ಧ ವೈರಿ ಪಾಕಿಸ್ತಾನ ಒಂದು ಸ್ಥಾನ ಕುಸಿತ ಕಂಡು 6ನೇ ಸ್ಥಾನದಲ್ಲಿದೆ.
ಸದ್ಯ ಅಫಘಾನಿಸ್ತಾನ ತಂಡ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು 8 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನು 2 ಪಂದ್ಯಗಳು ಬಾಕಿ ಇವೆ. ಎದುರಾಳಿಗಳು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ. ಈ 2 ಪಂದ್ಯಗಳನ್ನು ಆಫ್ಘನ್ ಗೆದ್ದರೆ 12 ಅಂಕ ಪಡೆದು ಸೆಮಿಫೈನಲ್ ಪ್ರವೇಶ ಪಡೆಯಬಹುದು. ಆದರೆ ಇಲ್ಲೂ ಕೆಲ ಲೆಕ್ಕಾಚಾರಗಳಿವೆ.
ಆಫ್ಘನ್ ಸೆಮಿ ಲೆಕ್ಕಾಚಾರ ಹೇಗಿದೆ?
4ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಇನ್ನುಳಿದ 2 ಪಂದ್ಯಗಳ ಪೈಕಿ ಒಂದನ್ನು ಸೋಲಬೇಕು. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮೂರು ಪಂದ್ಯಗಳಲ್ಲಿ 2 ಪಂದ್ಯವನ್ನು ಸೋಲಬೇಕು ಹೀಗಾದರೆ ಆಫ್ಘನ್ ಯಾವುದೇ ಚಿಂತೆಯಿಲ್ಲದೆ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಅಫಘಾನಿಸ್ತಾನ ಮುಂದಿನ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದರೆ 10 ಅಂಕ ಆಗಲಿದೆ. ಆಗ ಕಿವೀಸ್ ಮತ್ತು ಆಸೀಸ್ ಎಲ್ಲ ಪಂದ್ಯಗಳನ್ನು ಸೋಲು ಕಾಣಬೇಕಾಗುತ್ತದೆ. ಇಲ್ಲವಾದಲ್ಲಿ ಆಫ್ಘನ್ ಲೆಕ್ಕಾಚಾರ ಉಲ್ಟಾ ಆಗಲಿದೆ. ಕೇವಲ ಆಸೀಸ್ ಕಿವೀಸ್ ಮಾತ್ರವಲ್ಲ ಪಾಕ್ ಕೂಡ ಕನಿಷ್ಠ ಒಂದು ಪಂದ್ಯ ಸೋಲಬೇಕು.
ಇದನ್ನೂ NED vs AFG: ಡಚ್ಚರನ್ನು ಮಣಿಸಿ ಪಾಕ್ ಹಿಂದಿಕ್ಕಿದ ಆಫ್ಘನ್; ಸೆಮಿಗೆ ಇನ್ನೆರಡು ಹೆಜ್ಜೆ ಬಾಕಿ
ನೆದರ್ಲೆಂಡ್ಸ್ ತಂಡ ಈ ಪಂದ್ಯದಲ್ಲಿ ಸೋಲು ಕಂಡರೂ ಈ ಹಿಂದೆ ಇದ್ದ 8ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಡಚ್ಚರಿಗೆ ಇನ್ನು 2 ಪಂದ್ಯಗಳು ಬಾಕಿ ಉಳಿದಿದೆ. ಅಂತಿಮ ಪಂದ್ಯ ಭಾರತ ವಿರುದ್ಧ ನ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ.
ಇದನ್ನೂ ಓದಿ ಮಳೆ ಭೀತಿಯ ಮಧ್ಯೆ ಪಾಕ್-ಕಿವೀಸ್ ಅದೃಷ್ಟ ಪರೀಕ್ಷೆ; ಇತ್ತಂಡಗಳಿಗೂ ಗೆಲುವು ಅತ್ಯಗತ್ಯ
ನೂತನ ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 7 | 7 | 0 | 14 | +2.102 |
ದಕ್ಷಿಣ ಆಫ್ರಿಕಾ | 7 | 6 | 1 | 12 | +2.290 |
ಆಸ್ಟ್ರೇಲಿಯಾ | 6 | 4 | 2 | 8 | +0.970 |
ನ್ಯೂಜಿಲ್ಯಾಂಡ್ | 7 | 4 | 3 | 8 | +0.484 |
ಅಫಘಾನಿಸ್ತಾನ | 7 | 4 | 3 | 8 | -0.330 |
ಪಾಕಿಸ್ತಾನ | 7 | 3 | 4 | 6 | -0.024 |
ಶ್ರೀಲಂಕಾ | 7 | 2 | 5 | 4 | -1.162 |
ನೆದರ್ಲ್ಯಾಂಡ್ಸ್ | 7 | 2 | 5 | 4 | -1.398 |
ಬಾಂಗ್ಲಾದೇಶ | 7 | 1 | 6 | 2 | -1.446 |
ಇಂಗ್ಲೆಂಡ್ | 6 | 1 | 5 | 2 | -1.652 |
ಇಂಗ್ಲೆಂಡ್ ತಂಡದ ಸೆಮಿ ಲೆಕ್ಕಾಚಾರ
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸದ್ಯ ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡು 2 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಬಟ್ಲರ್ ಪಡೆಗೆ ಮೂರು ಪಂದ್ಯಗಳು ಬಾಕಿ ಉಳಿದಿವೆ. ಎದುರಾಳಿಗಳು ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ. ಈ ಮೂರು ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದರೆ 8 ಅಂಕ ಸಂಪಾದಿಸಿ, ಉಳಿದಿರುವ ಮೂರು ಸ್ಥಾನಗಳ ಪೈಕಿ ಯಾವುದಾದದರು ಒಂದು ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಬಹುದು. ಆದರೆ ಇಲ್ಲಿಯೂ ಒಂದು ಲೆಕ್ಕಾಚಾರವಿದೆ.
ಸದ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಉಳಿದಿರುವ ಮೂರು ಪಂದ್ಯಗಳಲ್ಲಿ ಸೋಲು ಕಾಣಬೇಕು. ಆಗ ಈ ಮೂರು ಸೋಲಿನಿಂದಾಗಿ ಉಭಯ ತಂಡಗಳು ಈಗಿರುವ 8 ಅಂಕದಲ್ಲೇ ಉಳಿಯಲಿದೆ. ಆಗ ರನ್ರೇಟ್ ಆಧಾರದಲ್ಲಿ ಈ ಅದೃಷ್ಟ ಇಂಗ್ಲೆಂಡ್ಗೆ ಸಿಗಬಹುದು. ಏಕೆಂದರೆ ಸೋಲು ಕಂಡ ಕಾರಣ ಕಿವೀಸ್ ಮತ್ತು ಆಸೀಸ್ ತಂಡದ ರನ್ ರೇಟ್ ಕುಸಿತ ಕಂಡಿರುತ್ತದೆ. ಸತತ ಗೆಲುವು ಸಾಧಿಸಿದ ಇಂಗ್ಲೆಂಡ್ನ ರನ್ರೇಟ್ ಪ್ಲಸ್ ಆಗಿರುತ್ತದೆ. ಹೀಗಾಗಿ ಇಂಗ್ಲೆಂಡ್ಗೆ ಈ ಲಾಭ ಸಿಗಲಿದೆ. ಎಲ್ಲದ್ದಕ್ಕೂ ಇಂಗ್ಲೆಂಡ್ ಗೆಲವು ಕಾಣಬೇಕು.