Site icon Vistara News

World Cup 2023 : ವಿಶ್ವ ಕಪ್​ ವೇಳಾಪಟ್ಟಿಯಲ್ಲಿ ಮತ್ತೆ ಗೊಂದಲ, ಪಾಕಿಸ್ತಾನದ ಪಂದ್ಯ ಮತ್ತೆ ಮುಂದೂಡಿಕೆ

Hyderabad Ground

ಹೈದರಾಬಾದ್​: 2023ರ ಏಕದಿನ ವಿಶ್ವಕಪ್ (World Cup 2023) ವೇಳಾಪಟ್ಟಿ ಗೊಂದಲದಿಂದಾಗಿ ಬಿಸಿಸಿಐ (BCCI) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. 2023ರ ಏಕದಿನ ವಿಶ್ವಕಪ್ ಪಂದ್ಯಗಳ ದಿನಾಂಕವನ್ನು ಬದಲಾಯಿಸುವಂತೆ ಮತ್ತೊಂದು ರಾಜ್ಯ ಅಸೋಸಿಯೇಷನ್ ಭಾರತೀಯ ಕ್ರಿಕೆಟ್ ಮಂಡಳಿಯನ್ನು (BCCI) ಕೇಳಿದೆ. ಹೀಗಾಗಿ ಅನಿವಾರ್ಯವಾಗಿ ಮತ್ತೊಂದು ಪಂದ್ಯದ ದಿನಾಂಕವನ್ನು ಬದಲಿಸುವ ಅನಿವಾರ್ಯತೆಗೆ ಬಿಸಿಸಿಐಗೆ ಒಳಗಾಗಿದೆ. ಇದೆಲ್ಲ ಕಾರಣದಿಂದಾಗಿ ಕ್ರಿಕೆಟ್​ ಪ್ರೇಮಿಗಳು ಹಾಗೂ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಸೆಪ್ಟೆಂಬರ್ 28 ರಂದು ಕೊನೆಗೊಳ್ಳುವ ಹೈದಾರಾಬಾದ್​ನಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಅದೇ ದಿನ ಮಿಲಾನ್-ಉನ್-ನಬಿ ಹಬ್ಬವೂ ಬಂದಿದೆ. ಪರಿಣಾಮವಾಗಿ ಸೆಪ್ಟೆಂಬರ್ 29 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯವನ್ನು ನಡೆಸುವಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್​​ಸಿಎ ) ವಿನಂತಿಸಿದೆ ಎಂದು ಹೇಳಲಾಗಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 9 ಮತ್ತು 10 ರಂದು ನಡೆಯಲಿರುವ ವಿಶ್ವಕಪ್ 2023ರ ಎರಡು ಲೀಗ್ ಪಂದ್ಯಗಳು ಈಗಾಗಲೇ ಭದ್ರತಾ ಕಳವಳಗಳನ್ನು ಹುಟ್ಟುಹಾಕಿವೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​​ ವರದಿ ಮಾಡಿದೆ.

ತಮ್ಮ ಮನವಿಗೆ ಸಂಬಂಧಿಸಿದಂತೆ ಎಚ್​​ಸಿಎ ಮತ್ತೊಮ್ಮೆ ಬಿಸಿಸಿಐ ಕಾರ್ಯನಿರ್ವಾಹಕರಿಗೆ ಇಮೇಲ್ ಕಳುಹಿಸಿದೆ ಎಂದು ತಿಳಿದುಬಂದಿದೆ. ಅಭ್ಯಾಸ ಪಂದ್ಯಗಳು ಸೇರಿದಂತೆ 2023 ರ ವಿಶ್ವಕಪ್ ಪಂದ್ಯಗಳ ಟಿಕೆಟ್​ಗಳನ್ನು ಬಿಸಿಸಿಐ-ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಮಾರಾಟಕ್ಕೆ ಇಟ್ಟ ನಂತರ, ಎಚ್​​ಸಿಎ ತನ್ನ ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳಲಾಗಿದೆ.

ಎಚ್​ಸಿಎ ಅಸಮಾಧಾನ

ಭಾರತೀಯ ಮಂಡಳಿ (ಬಿಸಿಸಿಐ) ತಮ್ಮೊಂದಿಗೆ ಸರಿಯಾಗಿ ಸಂವಹನ ನಡೆಸಿಲ್ಲ ಮತ್ತು ತಿದ್ದುಪಡಿ ಮಾಡಿದ ವೇಳಾಪಟ್ಟಿಯನ್ನು ಒಳಗೊಂಡ ಅಧಿಕೃತ ಪತ್ರವನ್ನು ಅವರು ಇನ್ನೂ ಸ್ವೀಕರಿಸಿಲ್ಲ ಎಂದು ಎಚ್​​ಸಿಎ ಅಸಮಾಧಾನ ವ್ಯಕ್ತಪಡಿಸಿದೆ.

ಬದಲಾದ ವೇಳಾಪಟ್ಟಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳು ಐಸಿಸಿ ಅಥವಾ ಬಿಸಿಸಿಐನಿಂದ ಅಧಿಕೃತ ಪತ್ರಗಳನ್ನು ಒತ್ತಾಯಿಸುತ್ತಿದ್ದಾರೆ ಮತ್ತು ಎಚ್ಸಿಎ ಅಧಿಕಾರಿಗಳು ಅವರನ್ನು ಮನವೊಲಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಸ್ಥಾಪಿಸಲಾದ ವೇಳಾಪಟ್ಟಿ ದೃಢೀಕರಿಸಿ ಭಾರತೀಯ ಮಂಡಳಿಯು ಜೂನ್​ನಲ್ಲಿ ಪತ್ರ ಬರೆದಾಗಿನಿಂದ ಯಾವುದೇ ಸಂವಹನ ನಡೆದಿಲ್ಲ ಎಂದು ಹೇಳಲಾಗಿದೆ.

ಮಾಹಿತಿಯ ಪ್ರಕಾರ, ಅಕ್ಟೋಬರ್ 9 ಮತ್ತು 10 ರಂದು ಪಂದ್ಯವನ್ನು ಆಯೋಜಿಸುವ ವಿಚಾರವನ್ನು ಮರುಪರಿಶೀಲಿಸುವಂತೆ ಸ್ಥಳೀಯ ಸರ್ಕಾರ ಅನೌಪಚಾರಿಕವಾಗಿ ಮತ್ತೆ ವಿನಂತಿಸಿದೆ. ಏಕೆಂದರೆ ಅವರು ಒಂದು ಪಂದ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ind vs pak : ಭಾರತ-ಪಾಕ್ ಪಂದ್ಯದ ವೇಳೆ ಸ್ಟೇಡಿಯಮ್​ ಖಾಲಿ ಖಾಲಿ; ಯಾಕೆ ಗೊತ್ತೇ?

ಪಾಕಿಸ್ತಾನ ತಂಡ ತಂಗಲಿರುವ ಹೋಟೆಲ್​ ಬಳಿ ಭಾರಿ ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಬೇಕಾಗುತ್ತದೆ. ಒಂದು ಪಂದ್ಯಕ್ಕೆ ಸುಮಾರು 3,000 ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ಒದಗಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಮತ್ತೊಂದು ಪಂದ್ಯವನ್ನು ನಿಗದಿತ ದಿನದಂದು ಆಡಿದರೆ, ಪಾಕಿಸ್ತಾನ ಪಂದ್ಯಕ್ಕೆ ಸಾಕಷ್ಟು ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ಎಚ್​​ಸಿಎಗೆ ತಿಳಿಸಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಬಿಸಿಸಿಐ ಏಕದಿನ ವಿಶ್ವಕಪ್ 2023 ದಿನಾಂಕಗಳನ್ನು ಬದಲಾಯಿಸಲಿಲ್ಲ ಮತ್ತು ಎಚ್​ಸಿಎ ವಿನಂತಿಯ ಹೊರತಾಗಿಯೂ ತಮ್ಮ ಯೋಜನೆಯನ್ನು ಮುಂದುವರಿಸಿತು ಎಂದು ಹೇಳಲಾಗಿದೆ.

Exit mobile version