Site icon Vistara News

World Master Athletics: 95ನೇ ವಯಸ್ಸಿನಲ್ಲಿ ಮೂರು ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಗವಾನಿ ದೇವಿ

World Master Athletics: Bhagwani Devi created history by winning three golds at the age of 95

World Master Athletics: Bhagwani Devi created history by winning three golds at the age of 95

ನವದೆಹಲಿ: ಸಾಧನೆಗೆ ವಯಸ್ಸು ಅಡ್ಡಿಯಲ್ಲ ಅದಕ್ಕೆ ಕೇವಲ ಛಲ, ಬಲ ಗುರಿ ಇರಬೇಕು ಎಂಬ ಮಾತನ್ನು ಭಾರತ ಮೂಲದ ಭಗವಾನಿ ದೇವಿ, ನಿರೂಪಿಸಿದ್ದಾರೆ. ಹರ್ಯಾಣದ ಭಗವಾನಿ ದೇವಿ(Bhagwani Devi) ಅವರು ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಇಂಡೋರ್ ಚಾಂಪಿಯನ್‌ಶಿಪ್ 2023(World Master Athletics Indoor Championships) ನಲ್ಲಿ 95ನೇ ವಯಸ್ಸಿನಲ್ಲಿ 3 ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಬುಧವಾರ ರಾತ್ರಿ ಪೋಲೆಂಡ್‌ನ (Poland) ಟೊರುನ್‌ನಲ್ಲಿ ನಡೆದ 9ನೇ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಇಂಡೋರ್​ ಚಾಂಪಿಯನ್‌ಶಿಪ್ 2023ರಲ್ಲಿ ಈ ಸಾಧನೆ ಮಾಡಿದರು. ಆರಂಭದಲ್ಲಿ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡಿದ್ದ ಅವರು ಆ ಬಳಿಕ ನಡೆದ ಶಾಟ್‌ಪುಟ್ ಮತ್ತು ಡಿಸ್ಕಸ್ ಎಸೆತದಲ್ಲಿಯೂ ಪ್ರಾಬಲ್ಯ ಮರೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಒಟ್ಟಾರೆ ಅವರು ಟೂರ್ನಿಯಲ್ಲಿ ಮೂರು ಚಿನ್ನದ ಪದಕ ಜಯಿಸಿದರು.

ಅನುರಾಗ್ ಠಾಕೂರ್​ ಗುಣಗಾನ

ವಿಶ್ವ ಮಾಸ್ಟರ್ಸ್ ಅಥ್ಲೇಟಿಕ್ಸ್‍ನಲ್ಲಿ ವಯಸ್ಸಿನ ಹಂಗನ್ನು ತೊರೆದು ಭಾರತದ ಕ್ರೀಡಾಪಟುಗಳು ಪಾಲ್ಗೊಂಡಿದ್ದು ಹೆಮ್ಮೆಯ ವಿಷಯವೇ. ಅದರಲ್ಲೂ ಭಗವಾನಿ ದೇವಿ ಅವರು ಮೂರು ಚಿನ್ನದ ಪದಕವನ್ನು ದೇಶಕ್ಕೆ ಗೆದ್ದು ಕೊಟ್ಟಿದ್ದಾರೆ, ಅವರ ಕ್ರೀಡಾಸೂರ್ತಿಗೆ ಹ್ಯಾಟ್ಸಾಪ್ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರು ಗುಣಗಾನ ಮಾಡಿದ್ದಾರೆ. ಜತೆಗೆ ನಿಮ್ಮ ಈ ಸಾಧನೆ ಭಾರತೀಯ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದು ಟ್ವೀಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2023: ಗುರು ಶಿಷ್ಯರ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಶುಭಾರಂಭ

ಕಳೆದ ವರ್ಷವೂ ಇತಿಹಾಸ ನಿರ್ಮಿಸಿದ್ದ ಭಗವಾನಿ ದೇವಿ

ಕಳೆದ ವರ್ಷ ಫಿನ್‌ಲ್ಯಾಂಡ್‌ನ ಟಂಪರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022ರಲ್ಲಿ ಭಗವಾನಿ ದೇವಿ ಅವರು 100 ಮೀಟರ್ ಸ್ಪ್ರಿಂಟ್ ಸ್ಪರ್ಧೆಯಲ್ಲಿ 24.74 ಸೆಕೆಂಡುಗಳಲ್ಲಿ ಓಡಿ ಚಿನ್ನ ಗೆದ್ದಿದ್ದರು. ಚಿನ್ನದ ಜತೆಗೆ ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗಳಿಸಿದ್ದರು. ಈ ಸಾಧನೆಯನ್ನು ಅವರು 94 ನೇ ವಯಸ್ಸಿನಲ್ಲಿ ಮಾಡಿದ್ದರು.

ಇದಕ್ಕೂ ಮುನ್ನ ಚೆನ್ನೈನಲ್ಲಿ ನಡೆದಿದ್ದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮೆರೆದಿದ್ದರು. ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ, 94 ವರ್ಷದ ಅವರು ಫಿನ್‌ಲ್ಯಾಂಡ್‌ನಲ್ಲಿ 2022 ರ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದರು. ರಾಷ್ಟ್ರೀಯ ಮಾಸ್ಟರ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಮೊದಲು, ದೇವಿ ಅವರು ದೆಹಲಿ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. ಇದೀಗ ಅವರ ವಯಸ್ಸು ಹೆಚ್ಚಾದಂತೆ ಸಾಧನೆಯ ಪಟ್ಟಿಯೂ ಹೆಚ್ಚಾಗಲಾರಂಭಿಸಿದೆ. ಇದೇ ರೀತಿ ಅವರು ಮುಂದಿನ ದಿನಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತ ಶಕ್ತಿ ದೇವರು ಅವರಿಗೆ ಕರುಣಿಸಲಿ ಎನ್ನುವುದು ಹಲವರ ಆಶಯವಾಗಿದೆ.

Exit mobile version