ನವದೆಹಲಿ: ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(World Women’s Boxing) ಭಾರತದ ನೀತು ಗಂಗಾಸ್(Nitu Ghanghas) ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕ ಖಾತೆ ತೆರೆದಿದ್ದಾರೆ.
ಶನಿವಾರ ಕೆ.ಡಿ. ಜಾಧವ್ ಒಳಾಂಗಣದಲ್ಲಿ ನಡೆದ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀತು ಗಂಗಾಸ್ ಅವರು ಪ್ರಬಲ ಪಂಚ್ಗಳ ಮೂಲಕ ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ದಾಖಲಿಸಿದರು.
22 ವರ್ಷದ ಹರ್ಯಾಣದ ನೀತು ಅವರ ಸತತ ಪಂತ್ಗಳ ಮುಂದೆ ಅಲ್ಟಂಟ್‌ಸೆಟ್‌ಸೆಗ್ ಸಂಪೂರ್ಣವಾಗಿ ಮಂಕಾದರು. ಒಂದು ಅಂಕ ಗಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಈ ಟೂರ್ನಿಯಲ್ಲಿ ನೀತು ಅವರ ಪ್ರದರ್ಶನವನ್ನು ಗಮನಿಸುವಾಗಲೇ ಅವರು ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದನ್ನು ಇರಿಸಲಾಗಿತ್ತು. ಇದೀಗ ನಿರೀಕ್ಷೆಯಂತೆ ಅವರು ಚಿನ್ನದ ಪದಕಕ್ಕೆ ಪಂತ್ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ.
ಈ ಟೂರ್ನಿಯಲ್ಲಿ ಉಳಿದ ಮೂರು ಮಂದಿ ಭಾರತೀಯ ಬಾಕ್ಸ್ರ್ಗಳು ಫೈನಲ್ ಪ್ರವೇಶಿಸಿದ್ದಾರೆ. ಇದರಲ್ಲಿ ಸ್ವೀಟಿ ಬೂರಾ ಪಂದ್ಯ ಶನಿವಾರವೇ ನಡೆಯಲಿದೆ. ಉಳಿದ ಇಬ್ಬರು ಬಾಕ್ಸರ್ಗಳಾದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್(Lovlina Borgohain), ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
ಇದನ್ನೂ ಓದಿ ಮಹಿಳಾ ವಿಶ್ವ ಬಾಕ್ಸಿಂಗ್: ಲವ್ಲಿನಾ ಮೇಲೆ ನಿರೀಕ್ಷೆ
52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ನಿಖತ್ ಅವರಿಗೆ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವಿದೆ. ಒಂದೊಮ್ಮೆ ಜರೀನ್ ಫೈನಲ್‌ನಲ್ಲಿ ಗೆದ್ದರೆ ಮೇರಿ ಕೋಮ್(6 ಬಾರಿ) ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬಾಕ್ಸರ್ ಎನಿಸಿಕೊಳ್ಳಲಿದ್ದಾರೆ. ಫೈನಲ್‌ನಲ್ಲಿ ನಿಖತ್ ಅವರು ವಿಯೆಟ್ನಾಂನ ಗುಯೆನ್ ಥಿ ಟಾಮ್ ಸವಾಲನ್ನು ಎದುರಿಸಲಿದ್ದಾರೆ.
ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಈ ಕೂಟದಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಫೈನಲ್‌ನಲ್ಲಿ ಲವ್ಲಿನಾ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.