Site icon Vistara News

Cricket Viral: ಪಾಕಿಸ್ತಾನ​ ತಂಡದ ಮಾನ ಕಳೆದ ಅಂಪೈರ್; ವಿಡಿಯೊ ವೈರಲ್​

pakistan team fielding

ಲಂಡನ್​: ನಾನೇ ಶ್ರೇಷ್ಠ, ನಾನೇ ಬಲಿಷ್ಠ ಎಂದು ಜಂಬ ಕೊಚ್ಚಿಕೊಳ್ಳುವ ಪಾಕಿಸ್ತಾನ ಕ್ರಿಕೆಟ್​ ತಂಡದ ಕಳಪೆ ಫೀಲ್ಡಿಂಗ್​ನ ವಿಡಿಯೊವೊಂದನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ(Richard Kettleborough) ಹಂಚಿಕೊಂಡಿದ್ದಾರೆ. ಜತೆಗೆ ಈ ದಶಕದ ಅತ್ಯಂತ ಕೆಟ್ಟ ಫೀಲ್ಡಿಂಗ್ ತಂಡ ಎಂದು ಹೇಳಿದ್ದಾರೆ.

ಇಂಗ್ಲೆಂಡ್​ ಮೂಲದ 50 ವರ್ಷದ ರಿಚರ್ಡ್‌ ಕೆಟಲ್‌ಬರೋ ಕ್ರಿಕೆಟ್​ ಲೋಕದ ಸವ್ಯಸಾಚಿ ಅಂಪೈರ್​. ಇಂಗ್ಲೆಂಡ್​ ಪರ ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಆಡಿದ ಅನುಭವ ಹೊಂದಿದ್ದಾರೆ. ಒಟ್ಟು 33 ಪ್ರಥಮ ದರ್ಜೆ ಆಡಿ 1258 ರನ್​, 21 ಲಿಸ್ಟ್​ ಪಂದ್ಯಗಳಿಂದ 290 ರನ್​ ಬಾರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಅತ್ಯಂತ ಕಳಪೆ ಫೀಲ್ಡಿಂಗ್​ ನಡೆಸಿದರು. ಈ ಮೂಲಕ ಆಸೀಸ್​ ಆಟಗಾರರಿಗೆ ಹಲವು ಜೀವದಾನ ನೀಡಿದರು. ಇದನ್ನು ಕಂಡ ​ರಿಚರ್ಡ್‌ ಕೆಟಲ್‌ಬರೋ ಅವರು ಪಾಕಿಸ್ತಾನ ತಂಡದ ಹಲವು ಕಳಪೆ ಫೀಲ್ಡಿಂಗ್​ನ ವಿಡಿಯೊವನ್ನು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು, ​’ಬಹುಶಃ ಈ ದಶಕದ ಅತ್ಯಂತ ಕೆಟ್ಟ ಫೀಲ್ಡಿಂಗ್ ತಂಡ ಎಂದರೆ ಅದು ಪಾಕಿಸ್ತಾನ” ಎಂದು ಬರೆದುಕೊಂಡಿದ್ದಾರೆ. ಅಂಪೈರ್​ ಮಾಡಿರುವ ಈ ಪೋಸ್ಟ್​ ಎಲ್ಲೆಡೆ ವೈರಲ್(Cricket Viral)​ ಆಗುತ್ತಿದೆ.

ಇದನ್ನೂ ಓದಿ T20 World Cup: ಭಾರತ-ಪಾಕ್​ ಮುಂದಿನ ವರ್ಷದ ಟಿ20 ವಿಶ್ವ ಕದನಕ್ಕೆ ವೇದಿಕೆ ಸಿದ್ಧ!

6 ನಿಮಿಷಗಳಷ್ಟು ಸುದೀರ್ಘವಾಗಿರುವ ಈ ವಿಡಿಯದಲ್ಲಿ ಪಾಕಿಸ್ತಾನ ತಂಡ ಫೀಲ್ಡಿಂಗ್​ನಲ್ಲಿ ಮಾಡಿದ ಎಡವಟ್ಟುಗಳನ್ನು ತೋರಿಸಲಾಗಿದೆ. ಅದು ಕೂಡ ಅತ್ಯಂತ ಸುಲಭದ ಕ್ಯಾಚ್​, ರನೌಟ್​ ಹಾಗೂ ಬೌಂಡರಿಗಳನ್ನು ತಡೆಯುವಲ್ಲಿ ವಿಫಲಾದ ಕ್ಷಣಗಳು ಇದರಲ್ಲಿದೆ.

ಭಾರತದ ಪಾಲಿಗೆ ವಿಲನ್​

ಕೆಟಲ್‌ಬರೋ ಅವರನ್ನು ಟೀಮ್ ಇಂಡಿಯಾ ಪಾಲಿನ ಐರನ್ ಲೆಗ್ ಎಂದು ಕರೆಯುತ್ತಾರೆ. ಇದು ನಿಜ ಕೂಡ. ಏಕೆಂದರೆ ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿತ್ತು. ಈ ಬಾರಿಯ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅವರು ಅಂಪೈರ್​ ಆದಾಗ ಅಭಿಮಾನಿಗಳು ಭಾರತಕ್ಕೆ ಸೋಲು ಖಚಿತ ಎಂದು ಹೇಳಿದ್ದರು. ಈ ಭವಿಷ್ಯ ನಿಜವಾಗಿತ್ತು. ಭಾರತ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.

2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು.

Exit mobile version