ಬೆಂಗಳೂರು: ಮುಂಬರುವ ಭಾರತ ಹಾಗೂ ಇಂಗ್ಲೆಂಡ್ (Ind vs Eng) ನಡುವಿನ ಟೆಸ್ಟ್ ಸರಣಿಯಲ್ಲಿ ಗೆಲುವು ಭಾರತಕ್ಕೆ ನಿಶ್ಚಿತ ಎಂದು ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ. ಜಿಂಬಾಬ್ವೆಯ ಮಾಜಿ ನಾಯಕರಾಗಿರುವ ಅವರು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಇಂಗ್ಲೆಂಡ್ ತಂಡ ಸೋಲಿಸುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯ ಜನವರಿ 25ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತ ತಂಡದ ಸಿದ್ಧತೆ ಜೋರಾಗಿ ನಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ ) ತಂಡಕ್ಕೆ ಕಪ್ ಗೆಲ್ಲಿಸಿ ಕೊಡಲು ಮುಂದಾಗಿರುವ ಫ್ಲವರ್ ಅವರು ಈ ರೀತಿ ಹೇಳುತ್ತಾರೆ. ಇಂಗ್ಲೆಂಡ್ ಭಾರತವನ್ನು ಸೋಲಿಸಿದರೆ ಖಂಡಿತವಾಗಿಯೂ ನನಗೆ ಆಶ್ಚರ್ಯಕರ ಸಂಗತಿ ಎಂದು ಅವರು ಹೇಳಿದ್ದಾರೆ. ಭಾರತ ತಂಡ ತನ್ನ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಮತ್ತು ಆತ್ಮವಿಶ್ವಾಸದ ತಂಡವಾಗಿದೆ. ರಾಹುಲ್ ದ್ರಾವಿಡ್ ಅವರಿಂದ ಉತ್ತಮವಾಗಿ ತರಬೇತಿ ಪಡೆದಿದ್ದಾರೆ. ಭಾರತವು ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಹೀಗಾಗಿ ಅವರನ್ನು ಸೋಲಿಸುವುದು ಕಷ್ಟ ಎಂದು ಫ್ಲವರ್ ಹೇಳಿದ್ದಾರೆ.
ಆ್ಯಂಡಿ ಫ್ಲವರ್ ವಿಶೇಷವಾಗಿ ಭಾರತದ ಬೌಲಿಂಗ್ ಅನ್ನು ಶ್ಲಾಘಿಸಿದರು. ಇಂಗ್ಲೆಂಡ್ ತಂಡಕ್ಕೆ ಭಾರತ ಸ್ಪಿನ್ನರ್ಗಳು ಮತ್ತು ಸೀಮರ್ಗಳು ಒಡ್ಡುವ ಬೆದರಿಕೆಯನ್ನು ವಿಶ್ಲೇಷಿಸಿದರು. ಟೆಸ್ಟ್ ಪಂದ್ಯಗಳಲ್ಲಿ ಆಕ್ರಮಣಕಾರಿ ಶೈಲಿಯ ಆಟದಿಂದ ನಿರೂಪಿಸಲ್ಪಟ್ಟ ಬಜ್ಬಾಲ್ ಶೈಲಿಯನ್ನು ಇಂಗ್ಲೆಂಡ್ ಅಳವಡಿಸಿಕೊಂಡಿರುವುದನ್ನು ಅವರು ಒಪ್ಪಿಕೊಂಡರು. ಆದಾಗ್ಯೂ ಕಾರ್ಯತಂತ್ರದೊಂದಿಗೆ ಆ ತಂಡದ ಯಶಸ್ಸಿನ ಬಗ್ಗೆ ಫ್ಲವರ್ ಅನುಮಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ತಂಡದಿಂದ ಡ್ರಾಪ್ ಔಟ್ ಶಿಕ್ಷೆಯ ಬೆನ್ನಲ್ಲೇ ರಣಜಿ ಆಡಲು ಮುಂದಾದ ಶ್ರೇಯಸ್ ಅಯ್ಯರ್
ಕಳೆದ ಆ್ಯಶರ್ ಸರಣಿಯಲ್ಲಿ ನಾನು ಆಸ್ಟ್ರೇಲಿಯಾ ತಂಡದ ಜತೆಗೆ ಇದ್ದೆ. ಅದು ನಿಜವಾಗಿಯೂ ಆಸಕ್ತಿದಾಯಕ ಸಂದರ್ಭ ಎಂದು ನಾನು ಭಾವಿಸಿದ್ದೆ. ಬಹಳ ಬೇಗನೆ ಇನ್ನಷ್ಟು ಆಟಗಳನ್ನು ನೋಡುವ ಅವಕಾಶ ಸಿಕ್ಕಿದೆ. ಈಗ ಭಾರತ ಕ್ಲಾಸ್ ಬೌಲರ್ಗಳನ್ನು ಹೊಂದಿದ್ದಾರೆ. ಆಕ್ರಮಣಕಾರಿ ಇಂಗ್ಲಿಷ್ ಬ್ಯಾಟಿಂಗ್ ಲೈನ್ಅಪ್ ಅನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಈ ಎರಡು ತಂಡಗಳ ಆಟವನ್ನು ನೋಡುವುದು ಆಸಕ್ತಿಕಾರಕವಾಗಿದೆ ಎಂದು ಅವರು ಹೇಳಿದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಕೊಹ್ಲಿಗೆ ಬದಲಿ ಆಟಗಾರನನ್ನು ಘೋಷಿಸಲು ಬಿಸಿಸಿಐ ಸಜ್ಜಾಗಿದ್ದು, ಪ್ರಮುಖ ಬ್ಯಾಟರ್ಗಳ ಅಲಭ್ಯತೆ ಇಂಗ್ಲೆಂಡ್ ತಂಡವನ್ನು ಎದುರಿಸಲು ತಯಾರಿ ನಡೆಸುತ್ತಿರುವ ಭಾರತಕ್ಕೆ ಸವಾಲನ್ನು ಒಡ್ಡಿದೆ.