ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಆಡಿದ ಐದೂ ಪಂದ್ಯಗಳಲ್ಲಿಯೂ ಸೋಲು ಕಾಣುವ ಮೂಲಕ ಐಪಿಎಲ್ನಲ್ಲಿ ಪುರುಷರ ತಂಡದಂತೆ ನತದೃಷ್ಟ ತಂಡ ಎಂಬ ಅವಮಾನಕ್ಕೆ ಸಿಲುಕಿದೆ. ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳ ಸೋಲಿಗೆ ತುತ್ತಾಯಿತು. ಈ ಮೂಲಕ ಟೂರ್ನಿಯಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿಯೂ ಆರ್ಸಿಬಿ ಸೋಲು ಕಂಡಂತಾಗಿದೆ.
ಮುಂಬಯಿಯ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 150 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ 19.4 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 154 ರನ್ ಪೇರಿಸಿ ಗೆಲುವು ದಾಖಲಿಸಿತು. ಆರ್ಸಿಬಿ ಈ ಸೋಲಿನೊಂದಿಗೆ ಟೂರ್ನಿಯಿಂದ ಬಹುತೇಕ ಹೊರಬಿದ್ದಾಂತಾಗಿದೆ.
ಚೇಸಿಂಗ್ ವೇಳೆ ಡೆಲ್ಲಿ ಮೊದಲ ಓವರ್ನಲ್ಲಿಯೇ ಶಫಾಲಿ ವರ್ಮ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಇದರ ಬೆನ್ನಲ್ಲೇ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಕೂಡ 15 ರನ್ಗೆ ವಿಕೆಟ್ ಒಪ್ಪಿಸಿದ ಪರಿಣಾಮ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ಆಸೆರೆಯಾದ ಜೆಮಿಮಾ ರೋಡ್ರಿಗಸ್ ಮತ್ತು ಅಲೈಸ್ ಕ್ಯಾಪ್ಸಿ ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
17 ರನ್ ಗಳಿಸಿದ ವೇಳೆ ಜೀವದಾನ ಪಡೆದ ಜೆಮಿಮಾ ರೋಡ್ರಿಗಸ್ ಈ ಲಾಭವನ್ನು ಎರಡೂ ಕೈಗಳಿಂದ ಬಾಚಿ 32 ರನ್ ಬಾರಿಸಿದರು. ಅಲೈಸ್ ಕ್ಯಾಪ್ಸಿ 8 ಬೌಂಡರಿ ನೆರವಿನಿಂದ 38 ರನ್ ಗಳಿಸಿದರು. ಈ ಇಬ್ಬರು ಆಟಗಾರ್ತಿಯರ ವಿಕೆಟ್ ಪತನದ ಬಳಿಕ ಆರ್ಸಿಬಿ ಮೇಲುಗೈ ಸಾಧಿಸುವ ಸೂಚನೆ ನೀಡಿತು. ಆದರೆ ಜೆಸ್ ಜೊನಾಸೆನ್ ಮತ್ತು ಮರಿಜಾನ್ ಕಾಪ್ ದಿಟ್ಟ ಹೋರಾಟವೊಂದನ್ನು ನಡೆಸಿ ಆರ್ಸಿಬಿಯ ಗೆಲುವನ್ನು ಕಸಿದುಕೊಂಡರು. ಮರಿಜಾನ್ ಕಾಪ್ ಅಜೇಯ 32 ಮತ್ತು ಜೆಸ್ ಜೊನಾಸೆನ್ ಅಜೇಯ 29 ರನ್ ಬಾರಿಸಿದರು. ಆರ್ಸಿಬಿ ಪರ ಆಶಾ ಶೋಭನಾ 2 ವಿಕೆಟ್ ಉರುಳಿಸಿದರು.
ಇದನ್ನೂ ಓದಿ WPL 2023: ಗೆಲುವಿನ ನಾಗಾಲೋಟ ಮುಂದುವರಿಸಿದ ಮುಂಬೈ; ಯುಪಿ ವಿರುದ್ಧ 8 ವಿಕೆಟ್ ಜಯ
ಅರ್ಧಶತಕ ಬಾರಿಸಿದ ಎಲ್ಲಿಸ್ ಪೆರ್ರಿ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆರ್ಸಿಬಿಗೆ ಆಸೀಸ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಆಸರೆಯಾದರು. ಡೆಲ್ಲಿಯ ಫಾತಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಆರಂಭದಲ್ಲಿ ಎಸೆತವೊಂದಕ್ಕೆ ರನ್ ಗಳಿಸುತ್ತಿದ್ದ ಅವರು ಅಂತಿಮ 4 ಓವರ್ಗಳ ಆಟದ ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರ ಈ ಅಜೇಯ ಅರ್ಧಶತಕದ ಬ್ಯಾಟಿಂಗ್ ಸಾಹಸದಿಂದ ಆರ್ಸಿಬಿ ನೂರರ ಗಡಿ ದಾಟುವಲ್ಲಿ ಯಶಸ್ಸು ಕಂಡಿತು.
ಎಲ್ಲಿಸ್ ಪೆರ್ರಿಗೆ ಉತ್ತಮ ಸಾಥ್ ನೀಡಿದ ರಿಚಾ ಘೋಷ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನರೆವಾದರು. ಆದರೆ ಶಿಖಾ ಪಾಂಡೆ ಅವರ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಎಡವಿದ ಅವರು ಕೀಪರ್ ತನಿಯಾ ಭಾಟಿಯಾಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. 16 ಎಸೆತ ಎದುರಿಸಿದ ಅವರು ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 37 ರನ್ ಚಚ್ಚಿದರು. ಎಲ್ಲಿಸ್ ಪೆರ್ರಿ 52ಎಸೆತ ಎದುರಿಸಿ ಅಜೇಯ 67 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು.
ಕೂಟದಲ್ಲಿ ದುಬಾರಿ ಮೊತ್ತ ಪಡೆದ ಆಟಗಾರ್ತಿ ಸ್ಮೃತಿ ಮಂಧಾನಾ ಈ ಪಂದ್ಯದಲ್ಲಿಯೂ ಬ್ಯಾಟಿಂಗ್ ಮಂದಹಾಸ ಮೂಡಿಸುವಲ್ಲಿ ವಿಫಲರಾದರು. ಕೇವಲ 8 ರನ್ಗೆ ಔಟಾಗುವ ಮೂಲಕ ಆಡಿದ ಐದೂ ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು.
ಡೆಲ್ಲಿ ಪರ ಅನುಭವಿ ಬೌಲರ್ ಶಿಖಾ ಪಾಂಡೆ 4 ಓವರ್ಗೆ 23 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಕಳೆದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ಮರಿಜಾನೆ ಕಾಪ್ ಈ ಪಂದ್ಯದಲ್ಲಿ ವಿಕೆಟ್ ಪಡೆಯದಿದ್ದರೂ ನಾಲ್ಕು ಓವರ್ನಲ್ಲಿ ಒಂದು ಮೇಡನ್ ಸಹಿತ 18 ರನ್ ಬಿಟ್ಟುಕೊಟ್ಟ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು; 20 ಓವರ್ಗಳಲ್ಲಿ 4 ವಿಕೆಟ್ಗೆ 150 (ಎಲ್ಲಿಸ್ ಪೆರ್ರಿ ಅಜೇಯ 67, ರಿಚಾ ಘೋಷ್ 37, ಶಿಖಾ ಪಾಂಡೆ 23ಕ್ಕೆ 3).
ಡೆಲ್ಲಿ ಕ್ಯಾಪಿಟಲ್ಸ್: 19.4 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 154 ( ಅಲೈಸ್ ಕ್ಯಾಪ್ಸಿ 38, ಮರಿಜಾನ್ ಕಾಪ್ ಅಜೇಯ 32, ಜೆಸ್ ಜೊನಾಸೆನ್ ಅಜೇಯ 29, ಜೆಮಿಮಾ ರೋಡ್ರಿಗಸ್ 32, ಆಶಾ ಶೋಭನಾ 27ಕ್ಕೆ 2)