Site icon Vistara News

WPL 2023: ಆರ್​ಸಿಬಿಗೆ ಸೋಲಿನ ಡಿಚ್ಚಿ ಕೊಟ್ಟ ಡೆಲ್ಲಿ; 60 ರನ್ ಅಂತರದ​ ಗೆಲುವು

WPL 2023: Delhi beat RCB; A win by 60 runs

WPL 2023: Delhi beat RCB; A win by 60 runs

ಮುಂಬಯಿ: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಆರ್​ಸಿಬಿ(Royal Challengers Bangalore) ವಿರುದ್ಧ ಭರ್ಜರಿ 60 ರನ್​ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಮುಂಬಯಿಯ ಬ್ರಬೋರ್ನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ಲೇಡಿ ಸೆಹವಾಗ್​ ಖ್ಯಾತಿಯ ಡ್ಯಾಶಿಂಗ್​ ಓಪನರ್​ ಶಫಾಲಿ ವರ್ಮಾ(84) ಮತ್ತು ನಾಯಕಿ ಮೆಗ್​ ಲ್ಯಾನಿಂಗ್(72)​ ಅವರ ಸ್ಫೋಟಕ ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 223 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಆರ್​ಸಿಬಿ ತನ್ನ ಪಾಲಿನ ಓವರ್​ನಲ್ಲಿ 8 ವಿಕೆಟ್​ ಕಳೆದುಕೊಂಡು 163 ರನ್​ ಗಳಿಸಿ ಶರಣಾಯಿತು.

ನಾಟಕೀಯ ಕುಸಿತ ಕಂಡ ಆರ್​ಸಿಬಿ

ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ ಉತ್ತಮ ಆರಂಭ ಪಡೆಯಿತು. ನಾಯಕಿ ಸ್ಮೃತಿ ಮಂಧಾನಾ ಮತ್ತು ನ್ಯೂಜಿಲ್ಯಾಂಡ್​ ತಂಡದ ಅನುಭವಿ ಆಟಗಾರ್ತಿ ಸೋಫಿ ಡಿವೈನ್‌ ಬಿರುಸಿನ ಬ್ಯಾಟಿಂಗ್​ ಮೂಲಕ ಡೆಲ್ಲಿ ಬೌಲರ್​ಗಳನ್ನು ಕಾಡಿದರು. 4 ಓವರ್​ಗೆ 40 ರನ್​ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಆಟವನ್ನು ಗಮನಿಸುವಾಗ ಆರ್​ಸಿಬಿ ಈ ದೊಡ್ಡ ಮೊತ್ತವನ್ನು ಸಲೀಸಾಗಿ ಚೇಸ್​ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಉಭಯ ಆಟಗಾರ್ತಿಯರ ವಿಕೆಟ್​ ಪತನದ ಬಳಿಕ ಆರ್​ಸಿಬಿ ನಾಟಕೀಯ ಕುಸಿತ ಕಂಡು ಸೋಲು ಕಂಡಿತು.

ಸ್ಮೃತಿ ಮಂಧಾನಾ 23 ಎಸೆತ ಎದುರಿಸಿ 35 ರನ್​ ಬಾರಿಸಿದರೆ, ಎಲ್ಲಿಸ್​ ಪೆರಿ 31 ರನ್​ ಗಳಿಸಿದರು. ಹಾರ್ಡ್​ ಹಿಟ್ಟರ್​ ಖ್ಯಾತಿಯ ರಿಚಾ ಘೋಷ್​ ಕೇವಲ 2 ರನ್​ಗೆ ಸೀಮಿತವಾಗಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಏಕಾಂಗಿ ಹೋರಾಟ ನಡೆಸಿದ ಇಂಗ್ಲೆಂಡ್​ ತಂಡದ ನಾಯಕಿ ಹೀತರ್​ ನೇಟ್​ 34 ರನ್​ ಬಾರಿಸಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು. ಡೆಲ್ಲಿ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಾರಾ ನೋರಿಸ್​ 4 ಓವರ್​ಗಳಲ್ಲಿ 29 ರನ್​ ನೀಡಿ 5 ವಿಕೆಟ್​ ಕಿತ್ತು ಮಿಂಚಿದರು. ಉಳಿದಂತೆ ಅಲೈಸ್‌ ಕ್ಯಾಪ್ಸಿ 2 ವಿಕೆಟ್​ ಉರುಳಿಸಿದರು.

ಸ್ಫೋಟಕ ಬ್ಯಾಟಿಂಗ್ ನಡೆಸಿದ ಡೆಲ್ಲಿ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಡೆಲ್ಲಿ ಪರ ಶಫಾಲಿ ವರ್ಮಾ(Shafali Verma) ಮತ್ತು ಮೆಗ್​ ಲ್ಯಾನಿಂಗ್(Meg Lanning) ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್​ ನಡೆಸಿ​ ಆರ್​ಸಿಬಿ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ಪ್ರತಿ ಓವರ್​ನಲ್ಲಿಯೂ ಸಿಕ್ಸರ್​ ಬೌಂಡರಿ ಬಾರಿಸಿ ಕಾಡಿದರು. ಓವರ್​ಗೆ 10ರ ಸರಾಸರಿಯಲ್ಲಿ ರನ್​ ರಾಶಿ ಹಾಕಿದರು.

ಜಿದ್ದಿಗೆ ಬಿದ್ದವರಂತೆ ಆಡಿದ ಉಭಯ ಆಟಗಾರ್ತಿಯರು ಅರ್ಧಶತಕ ಬಾರಿಸಿ ಮಿಂಚಿದರು. ಆದರೆ 72 ರನ್​ ಗಳಿಸಿದ ವೇಳೆ ಮೆಗ್​​ ಲ್ಯಾನಿಂಗ್ ಅವರು ಹೀತರ್​ ನೈಟ್‌ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಅವರು​ 43 ಎಸೆತ ಎದುರಿಸಿ 13 ಬೌಂಡರಿ ಬಾರಿಸಿದರು. ಈ ವಿಕೆಟ್​ ಪತನದ ಬೆನ್ನಲೇ ಶಫಾಲಿ ವರ್ಮಾ ಕೂಡ ವಿಕೆಟ್​ ಕೈಚೆಲ್ಲಿದರು. ಈ ಎರಡೂ ವಿಕೆಟ್​ ಕೂಡ ಹೀತರ್​ ನೈಟ್‌ ಪಾಲಾಯಿತು. ಶಫಾಲಿ ಮತ್ತು ಲ್ಯಾನಿಂಗ್​ ಮೊದಲ ವಿಕೆಟ್​ಗೆ 162 ರನ್​ ಜತೆಯಾಟ ನಡೆಸಿದರು.

ಸ್ಫೋಟಕ ಬ್ಯಾಟಿಂಗ್​ ನಡೆಸಿದ ಶಫಾಲಿ ವರ್ಮಾ 45 ಎಸೆತ ಎದುರಿಸಿ 10 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ 84 ರನ್​ ಬಾರಿಸಿ ಮಿಂಚಿದರು. ಅಂತಿಮವಾಗಿ ಜೆಮಿಮಾ ರೋಡ್ರಿಗಸ್​(22), ಮರಿಜಾಯನ್​ ಕಾಪ್​(39) ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಮರಿಜಾಯನ್​ ಕಾಪ್ 17 ಎಸೆತದಲ್ಲಿ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅಜೇಯ 39 ರನ್​ ಬಾರಿಸಿದರು. ಆರ್​ಸಿಬಿ ಪರ ಹೀತರ್​ ನೈಟ್‌ 2 ವಿಕೆಟ್​ ಕಿತ್ತರು.

ಇದನ್ನೂ ಓದಿ WPL 2023: ಗೆಲುವಿನ ಹಳಿ ಏರಿತೇ ಗುಜರಾತ್​ ಜೈಂಟ್ಸ್​?

ಸಂಕ್ಷಿಪ್ತ ಸ್ಕೋರ್​: ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ2 ವಿಕೆಟ್​ಗೆ 223 (ಶಫಾಲಿ ವರ್ಮಾ 84, ಮೆಗ್​ ಲ್ಯಾನಿಂಗ್​ 72, ಮರಿಜಾಯನ್ ಅಜೇಯ 39, ಜೆಮಿಮಾ ರೋಡ್ರಿಗಸ್​ ಅಜೇಯ 22,​ ಕಾಪ್ ಹೀತರ್​ ನೈಟ್​ 40ಕ್ಕೆ 2)

ಆರ್​ಸಿಬಿ: 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 163 (ಸ್ಮೃತಿ ಮಂಧಾನಾ 35, ಹೀತರ್​ ನೈಟ್​ 34, ಎಲಿಸ್​ ಪೆರಿ 31 ತಾರಾ ನೋರಿಸ್ 29ಕ್ಕೆ 5).

Exit mobile version