Site icon Vistara News

WPL 2023: ಯುಪಿ ವಾರಿಯರ್ಸ್​ ಮೇಲೆ ಸವಾರಿ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​;42 ರನ್​ ಗೆಲುವು

WPL 2023: Delhi Capitals ride UP Warriors to win by 42 runs

WPL 2023: Delhi Capitals ride UP Warriors to win by 42 runs

ಮುಂಬಯಿ: ಸಂಘಟಿತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಯುಪಿ ವಾರಿಯರ್ಸ್(UP Warriorz)​ ವಿರುದ್ಧ 42 ರನ್​ಗಳ​ ಗೆಲುವು ದಾಖಲಿಸಿದೆ. ಯುಪಿ ವಾರಿಯರ್ಸ್​ ಟೂರ್ನಿಯಲ್ಲಿ ಮೊದಲು ಸೋಲು ಕಂಡಿತು.

ಮುಂಬಯಿಯ ಡಾ. ಡಿ.ವೈ. ಪಾಟೀಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ(ಮಾರ್ಚ್​7) ಮಹಿಳಾ ಪ್ರೀಮಿಯರ್​ ಲೀಗ್​ನ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 211 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತನ್ನ ಪಾಲಿನ ಓವರ್​ನಲ್ಲಿ 5 ವಿಕೆಟ್​ನಷ್ಟಕ್ಕೆ 169 ರನ್​ ಗಳಿಸಿ ಶರಣಾಯಿತು.

ಬೃಹತ್​ ಮೊತ್ತವನ್ನು ಕಂಡು ಕಂಗಾಲಾದ ಯುಪಿ ವಾರಿಯರ್ಸ್​ ಆರಂಭದಲ್ಲೇ ವಿಕೆಟ್​ ಕೈ ಚೆಲ್ಲಿ ಆಘಾತ ಎದುರಿಸಿತು. ತಂಡದ ಮೊತ್ತ 30 ರನ್​ ಆಗುವ ವೇಳೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡಿತು. ಕಳೆದ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಧೋನಿಗೆ ವಿಶೇಷ ಗೌರವ ಸಲ್ಲಿಸಿದ ಕಿರಣ್​ ನವಗಿರೆ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದರು. ಇವರ ಬ್ಯಾಟಿಂಗ್​ ವೈಫಲ್ಯ ಮತ್ತು ಗ್ರೇಸ್​ ಹ್ಯಾರಿಸ್​ ಅವರ ಅನುಪಸ್ಥಿತಿ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಯಿತು.

ಡೆಲ್ಲಿ ಪರ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಆಲ್​ರೌಂಡರ್​ ಪ್ರದರ್ಶನ ನೀಡಿದ ಜೆಸ್‌ ಜೊನಾಸೆನ್‌ 3 ವಿಕೆಟ್​ ಕಿತ್ತು ಮಿಂಚಿದರು. ಬ್ಯಾಟಿಂಗ್​ನಲ್ಲಿ 20 ಎಸೆತ ಎದುರಿಸಿ ಅಜೇಯ 42 ರನ್​ ಬಾರಿಸಿ ಡೆಲ್ಲಿ ಗೆಲುವಿನಲ್ಲಿ ಹೀರೋ ಆಗಿ ಮೂಡಿಬಂದರು. ಯುಪಿ ಪರ ಏಕಾಂಗಿ ಹೋರಾಟ ನಡೆಸಿದ ತಹ್ಲಿಯಾ ಮೆಗ್ರಾತ್ ಅಜೇಯ 90 ರನ್​ ಗಳಿಸಿ ತಂಡದ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು. ತಹ್ಲಿಯಾ ಮೆಗ್ರಾತ್ 50 ಎಸೆತಗಳಲ್ಲಿ ಅಜೇಯ 90 ರನ್​ ಬಾರಿಸಿದರು. ಈ ವಿಸ್ಫೋಟಕ ಬ್ಯಾಟಿಂಗ್​ ವೇಳೆ 11 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಲ್ಪಟ್ಟಿತು.

ಮೆಗ್​ ಲ್ಯಾನಿಂಗ್ ಅರ್ಧಶತಕ

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಉತ್ತಮ ಆರಂಭ ಪಡೆಯಿತು. ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಮೆಗ್​ ಲ್ಯಾನಿಂಗ್​ ಈ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ಮುಂದುವರಿಸಿದರು. ಆದರೆ ಶಫಾಲಿ ವರ್ಮ ಕೇವಲ 17 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಯುಪಿ ಬೌಲರ್​ಗಳನ್ನು ಕಾಡಿದ ಮೆಗ್​ ಲ್ಯಾನಿಂಗ್​ 42 ಎಸೆತ ಎದುರಿಸಿ 10 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 70 ರನ್​ ಬಾರಿಸಿದರು. ಈ ವಿಕೆಟ್​ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ ಪಾಲಾಯಿತು.

ಸ್ಫೋಟಕ ಬ್ಯಾಟಿಂಗ್​ ನಡೆಸಿದ ಜೊನಾಸೆನ್‌-ಜೆಮಿಮಾ

9 ಓವರ್​ ಪೂರ್ಣಗೊಂಡ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಈ ವೇಳೆ ಡೆಲ್ಲಿ ತಂಡ 1 ವಿಕೆಟ್​ ಕಳೆದುಕೊಂಡು 87 ರನ್​ ಕಲೆಹಾಕಿತ್ತು. ಆದರೆ ಮಳೆ ನಿಂತ ಬಳಿಕ ಆಡಲಿಳಿದ ಡೆಲ್ಲಿ ಸತತ ವಿಕೆಟ್​ ಕಳೆದುಕೊಂಡು ಒಂದು ಹಂತದಲ್ಲಿ 150 ಗಡಿದಾಟುವುದು ಕಷ್ಟ ಎಂಬ ಪರಿಸ್ಥಿತಿಗೆ ಸಿಲುಕಿತು. ಆದರೆ ಅಂತಿಮ ಮೂರು ಓವರ್​ಗಳ ಆಟದಲ್ಲಿ ಜೆಸ್‌ ಜೊನಾಸೆನ್‌ ಮತ್ತು ಜೆಮಿಮಾ ರೋಡ್ರಿಗಸ್​ ಸ್ಫೋಟಕ ಬ್ಯಾಟಿಂಗ್​ ನಡೆಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಯುಪಿ ಬೌಲರ್​ಗಳು ಅಂತಿಮ ಹಂತದಲ್ಲಿ ಜೆಮಿಮಾ ಮತ್ತು ಜೊನಾಸೆನ್‌ ಬ್ಯಾಟಿಂಗ್​ ಆರ್ಭಟದ ಮುಂದೆ ಸರಿಯಾಗಿ ದಂಡಿಸಿಕೊಂಡರು. ಅಂತಿಮವಾಗಿ ಡೆಲ್ಲಿ ತಂಡ 200ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಜೆಸ್‌ ಜೊನಾಸೆನ್‌ 20 ಎಸೆತ ಎದುರಿಸಿ ಅಜೇಯ 42 ರನ್​ ಬಾರಿಸಿದರು. ಈ ಇನಿಂಗ್ಸ್​ ವೇಳೆ 3 ಬೌಂಡರಿ ಮತ್ತು ಮೂರು ಸಿಕ್ಸರ್​ ಸಿಡಿಯಲ್ಪಟ್ಟಿತು. ಜೆಮಿಮಾ 34 ರನ್​ ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್​: ಡೆಲ್ಲಿ ಕ್ಯಾಪಿಟಲ್ಸ್;​ 20 ಓವರ್​ಗಳಲ್ಲಿ 4 ವಿಕೆಟ್​ಗೆ 212(ಮೆಗ್​ ಲ್ಯಾನಿಂಗ್​ 70, ಜೆಸ್‌ ಜೊನಾಸೆನ್‌ 42* ಜೆಮಿಮಾ ರೋಡ್ರಿಗಸ್ 34* ಶಬ್ನಿಮ್ ಇಸ್ಮಾಯಿಲ್ 29ಕ್ಕೆ 1)

ಇದನ್ನೂ ಓದಿ WPL 2023: ಆರ್​ಸಿಬಿ VS ಗುಜರಾತ್​; ಯಾರಿಗೆ ಒಲಿಯಲಿದೆ ಮೊದಲ ಗೆಲುವು?​

ಯುಪಿ ವಾರಿಯರ್ಸ್​: 20 ಓವರ್​ಗಳಲ್ಲಿ 5 ವಿಕೆಟ್​ಗೆ 169(ತಹ್ಲಿಯಾ ಮೆಗ್ರಾತ್ ಅಜೇಯ 90, ಜೆಸ್‌ ಜೊನಾಸೆನ್‌ 43ಕ್ಕೆ 3 ವಿಕೆಟ್)

Exit mobile version