ಮುಂಬಯಿ: ಟಿ20 ವಿಶ್ವ ಕಪ್ ವಿಜೇತ ಆಸೀಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸ್ನೇಹ್ ರಾಣಾ ನೇತೃತ್ವದ ಗುಜರಾತ್ ಜೈಂಟ್ಸ್ ತಂಡಗಳು ಗುರುವಾರ(ಮಾರ್ಚ್ 16) ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(WPL 2023) ಮುಖಾಮುಖಿಯಾಗಲಿವೆ.
ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿರುವ ಡೆಲ್ಲಿ ಈ ಪಂದ್ಯದಲ್ಲಿ ಗೆದ್ದರೆ 10 ಅಂಕದೊಂದಿಗೆ ಎಲಿಮಿನೇಟರ್ ಟಿಕೆಟ್ ಖಾತ್ರಿಗೊಳಿಸಲಿದೆ. ಗುಜರಾತ್ ಗೆದ್ದರೆ 4 ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೇರಲಿದೆ. ಒಂದೊಮ್ಮೆ ಸೋತರೆ ಆರ್ಸಿಬಿಗೆ ಎಲಿಮಿನೇಟರ್ ಪ್ರವೇಶ ಪಡೆಯುವ ಆಸೆ ಜೀವಂತ ಉಳಿಯಲಿದೆ.
ಗುಜರಾತ್ ತಂಡ ಪ್ರತಿ ಪಂದ್ಯದಲ್ಲಿಯೂ ಹಲವು ಬದಲಾವಣೆ ಮೂಲಕ ಪ್ರಯೋಗ ಮಾಡುತ್ತಿದ್ದರೂ ಗೆಲುವು ಮಾತ್ರ ದೂರವೇ ಉಳಿದಿದೆ. ತಂಡದ ಸ್ಟಾರ್ ಆಟಗಾರ್ತಿ ಬೆತ್ ಮೂನಿ ಅವರ ಅನುಪಸ್ಥಿತಿ ಪ್ರತಿ ಪಂದ್ಯದಲ್ಲಿಯೂ ಎದ್ದು ಕಾಣುತ್ತಿದೆ. ಈ ಪಂದ್ಯದಲ್ಲಾದರು ಒಗ್ಗಟಿನ ಪ್ರದರ್ಶನ ತೋರಿದರೆ ಮುಂದಿನ ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಬಹುದು.
ಇದನ್ನೂ ಓದಿ WPL 2023 : ಆರ್ಸಿಬಿ ಮಹಿಳಾ ತಂಡದ ಕ್ಯಾಂಪ್ಗೆ ಭೇಟಿ ನೀಡಿ ಸಲಹೆ ಕೊಟ್ಟ ವಿರಾಟ್ ಕೊಹ್ಲಿ
ಮೇಲ್ನೋಟಕ್ಕೆ ಈ ಪಂದ್ಯದಲ್ಲಿಯೂ ಡೆಲ್ಲಿಯೇ ಗೆಲ್ಲುವ ತಂಡವಾಗಿ ಗೋಚರಿಸಿದೆ. ಏಕೆಂದರೆ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಮೆಗ್ ಲ್ಯಾನಿಂಗ್ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ಒಂದೊಮ್ಮೆ ಉಭಯ ಆಟಗಾರ್ತಿಯರು ಈ ಪಂದ್ಯದಲ್ಲಿ ಆಡದಿದ್ದರೂ ತಂಡಕ್ಕೆ ಯಾವುದೇ ಹಿನ್ನಡೆಯಾಗದು. ಕಾರಣ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿ ಪಂದ್ಯದ ಗತಿಯನ್ನೇ ಬದಲಿಸುವ ಹಲವು ಆಟಗಾರ್ತಿಯರು ಈ ತಂಡದಲ್ಲಿದ್ದಾರೆ. ಇದು ಡೆಲ್ಲಿ ತಂಡದ ವಿಶೇಷತೆ. ಕೆಲ ತಂಡಗಳಂತೆ ಇಲ್ಲಿ ಒಬ್ಬ ಆಟಗಾರ್ತಿಯರನ್ನು ನೆಚ್ಚಿಕೊಂಡಿಲ್ಲ. ಪ್ಲೇಯಿಂಗ್ ಇಲೆವೆನ್ನಲ್ಲಿರುವ ಪ್ರತಿಯೊಬ್ಬರು ಸಮರ್ಥರಾಗಿದ್ದಾರೆ.