ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಅತ್ಯಂತ ಯಶಸ್ವಿ ತಂಡವಾದ ಅಜೇಯ ಮುಂಬೈ ಇಂಡಿಯನ್ಸ್(Mumbai Indians Women) ಮತ್ತು ಗುಜರಾತ್ ಜೈಂಟ್ಸ್(Gujarat Giants) ತಂಡಗಳು ಮಂಗಳವಾರದ (ಮಾರ್ಚ್ 14) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮುಂಬೈ ಈ ಪಂದ್ಯದಲ್ಲಿಯೂ ಗೆದ್ದರೆ 10 ಅಂಕದೊಂದಿಗೆ ನೇರವಾಗಿ ಮೊದಲ ತಂಡವಾಗಿ ಫೈನಲ್ ಪ್ರವೇಶ ಪಡೆಯಲಿದೆ.
ಆಡಿದ ನಾಲ್ಕೂ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಿರುವ ಮುಂಬೈ ಆಟವನ್ನು ಗಮನಿಸುವಾಗ ಚೊಚ್ಚಲ ಆವೃತ್ತಿಯಲ್ಲೇ ಕಪ್ ಗೆಲ್ಲುವ ಸೂಚನೆಯೊಂದು ಲಭಿಸಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಎಷ್ಟೇ ದೊಡ್ಡ ಮೊತ್ತವನ್ನಾದರೂ ಸಲೀಸಾಗಿ ಬೆನ್ನಟ್ಟುವ ತಾಕತ್ತು ಹರ್ಮನ್ಪ್ರೀತ್ ಕೌರ್ ಪಡೆಗೆ ಇದೆ.
ಇದನ್ನೂ ಓದಿ WPL 2023: ಸತತ 5ನೇ ಸೋಲು; ಟೂರ್ನಿಯಿಂದ ಬಹುತೇಕ ಹೊರಬಿದ್ದ ಆರ್ಸಿಬಿ
ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಮುಂಬೈ ಬೃಹತ್ ಮೊತ್ತದ ಗೆಲುವು ಸಾಧಿಸಿ ಬೀಗಿತ್ತು. ಇದೀಗ ಈ ಸೋಲಿಗೆ ಗುಜರಾತ್ ಸೇಡು ತಿರಿಸೀತೇ ಎಂಬುವುದು ಈ ಪಂದ್ಯದ ಕೌತುಕ. ಬೆತ್ ಮೂನಿ ಅವರ ಬದಲು ತಂಡಕ್ಕೆ ಸೇರ್ಪಡೆಯಾದ ಲೇಡಿ ಬಟ್ಲರ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಕಳೆದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವನಿತಾ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದ್ದರು. ಆದರೆ ಇಲ್ಲಿ ಕೇವಲ ಒಂದಂಕಿಗೆ ಸೀಮಿತಗೊಂಡು ನಿರಾಸೆ ಅನುಭವಿಸಿದ್ದರು. ಈ ಪಂದ್ಯದಲ್ಲಿ ಅವರು ಸಿಡಿದು ನಿಂತರೆ ತಂಡಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ.