Site icon Vistara News

WPL 2023: ಶಫಾಲಿ ವರ್ಮಾ ಬ್ಯಾಟಿಂಗ್​ ಪ್ರತಾಪಕ್ಕೆ ಬೆದರಿದ ಗುಜರಾತ್​ ಜೈಂಟ್ಸ್​; ಡೆಲ್ಲಿಗೆ 10 ವಿಕೆಟ್​ ಜಯ

WPL 2023: Gujarat Giants threatened by Shafali Verma's batting prowess; Delhi won by 10 wickets

WPL 2023: Gujarat Giants threatened by Shafali Verma's batting prowess; Delhi won by 10 wickets

ಮುಂಬಯಿ: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಪ್ರತಾಪ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್​ ಜೈಂಟ್ಸ್​ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

​ಮುಂಬಯಿಯ ಡಿವೈ ಪಾಟೀಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ನ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ಜೈಂಟ್ಸ್​ 20 ಓವರ್​ಗಳಲ್ಲಿ 9 ವಿಕೆಟ್​ಗೆ 105 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ 7.1 ಓವರ್​ನಲ್ಲಿ ವಿಕೆಟ್​ ನಷ್ಟವಿಲ್ಲದೆ​ 107 ರನ್ ಬಾರಿಸಿ​ ಗೆಲುವಿನ ನಗೆ ಬೀರಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಪರ ಲೇಡಿ ಸೆಹವಾಗ್​ ಖ್ಯಾತಿಯ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್​ ಮೂಲಕ ಗುಜರಾತ್​ ಜೈಂಟ್ಸ್​ ಬೌಲರ್​ಗಳ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬಡಿದಟ್ಟಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ತಂಡದ ಅರ್ಧದಷ್ಟು ಮೊತ್ತ ಶಫಾಲಿ ಅವರದ್ದೇ ಆಗಿತ್ತು. ಶಫಾಲಿ ಬ್ಯಾಟಿಂಗ್​ ಆರ್ಭಟ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾದರು. ಒಟ್ಟು 28 ಎಸೆತ ಎದುರಿಸಿದ ಅವರು ಬರೋಬ್ಬರಿ 10 ಬೌಂಡರಿ ಮತ್ತು 5 ಮನಮೋಹಕ ಸಿಕ್ಸರ್​ ನೆರವಿನಿಂದ ಅಜೇಯ 76 ರನ್​ ಬಾರಿಸಿದರು. ನಾಯಕಿ ಮೆಗ್​ ಲ್ಯಾನಿಂಗ್​ ಮೂರು ಬೌಂಡರಿ ನೆರವಿನಿಂದ ಅಜೇಯ 21 ರನ್​ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಗುಜರಾತ್​ ತಂಡಕ್ಕೆ ಮರಿಜಾನ್​ ಕಾಪ್​ ಘಾತಕ ಬೌಲಿಂಗ್​ ಮೂಲಕ ಆಘಾತ ನೀಡಿದರು. ​4 ಓವರ್​ ಬೌಲಿಂಗ್​ ನಡೆಸಿ 15 ರನ್​ ವೆಚ್ಚದಲ್ಲಿ ಪ್ರಮುಖ 5 ವಿಕೆಟ್​ ಕಿತ್ತು ಮಿಂಚಿದರು. ಹಿರಿಯ ಬೌಲರ್​ ಶಿಖಾ ಪಾಂಡೆ 26ಕ್ಕೆ ಮೂರು, ರಾಧಾ ಯಾದವ್​ 19ಕ್ಕೆ 1 ವಿಕೆಟ್​ ಉರುಳಿಸಿದರು.

ಇನಿಂಗ್ಸ್​ ಆರಂಭಿಸಿದ ಗುಜರಾತ್​ ಜೈಂಟ್ಸ್​ ಸ್ಥಿತಿ ಆರಂಭದಿಂದಲೇ ಶೋಚನೀಯವಾಗಿತ್ತು. ಖಾತೆ ತೆರೆಯುವ ಮುನ್ನವೇ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ 20 ರನ್ ದಾಟುವ ವೇಳೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಇನ್ನೇನು 50 ರನ್​ ಆಗುವಷ್ಟರಲ್ಲಿ ಗಂಟುಮೂಟೆ ಕಟ್ಟುತ್ತದೆ ಎಂದು ಭಾವಿಸಲಾಗಿತ್ತು. ಮರಿಜಾನ್​ ಪಾಕ್​ ಒಂದರ ಹಿಂದೆ ಒಂದರಂತೆ ವಿಕೆಟ್​ ಕೀಳುತ್ತಲೇ ಸಾಗಿದರು.

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಸೋಫಿಯಾ ಡಂಕ್ಲಿ ಅವರನ್ನು ಈ ಪಂದ್ಯದಿಂದ ಹೊರಗಿಟ್ಟು ಪ್ರಯೋಗ ನಡೆಸಿದ ಗುಜರಾತ್​ ಕೈ ಸುಟ್ಟುಕೊಂಡಿತು. ಬೆತ್​ ಮೂನಿ ಅವರ ಬದಲು ತಂಡಕ್ಕೆ ಸೇರ್ಪಡೆಯಾಗ ದಕ್ಷಿಣ ಆಫಿಕಾದ ಹಾರ್ಡ್​ ಹಿಟ್ಟರ್​ ಲಾರಾ ವೊಲ್ವಾರ್ಡ್ಟ್ ಕೇವಲ 1 ರನ್​ಗೆ ಸೀಮಿತಗೊಂಡು ನಿರಾಸೆ ಅನುಭವಿಸಿದರು. ಹರ್ಲೀನ್​ ಡಿಯೋಲ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ವಿಫಲವಾದದ್ದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು. ಡಿಯೋಲ್​ 20 ರನ್​ ಗಳಿಸಿದರು.​ ಕೆಳ ಕ್ರಮಾಂಕದಲ್ಲಿ ಕಿಮ್ ಗಾರ್ತ್(ಅಜೇಯ 32) ಮತ್ತು ಜಾರ್ಜಿಯಾ(22) ಅವರು ಸಣ್ಣ ಮಟ್ಟದ ಹೋರಾಟವೊಂದನ್ನು ನಡೆಸಿದ ಕಾರಣ ತಂಡ ನೂರರ ಗಟಿ ದಾಟಿತು.

ಇದನ್ನೂ ಓದಿ WPL 2023 : ಆರ್​ಸಿಬಿಗೆ ಮಗದೊಂದು ಹೀನಾಯ ಪರಾಜಯ, ಯುಪಿ ವಿರುದ್ಧ 10 ವಿಕೆಟ್​ ಸೋಲು

ಸಂಕ್ಷಿಪ್ತ ಸ್ಕೋರ್​: ಗುಜರಾತ್​ ಜೈಂಟ್ಸ್​; 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 105.​ (ಕಿಮ್ ಗಾರ್ತ್ ಅಜೇಯ 32, ಜಾರ್ಜಿಯಾ 22, ಮರಿಜಾನ್​ ಕಾಪ್​ 15ಕ್ಕೆ 5, ಶಿಖಾ ಪಾಂಡೆ 26ಕ್ಕೆ 3.

ಡೆಲ್ಲಿ ಕ್ಯಾಪಿಟಲ್ಸ್​: 7.1 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 107(ಶಫಾಲಿ ವರ್ಮಾ ಅಜೇಯ 76, ಮೆಗ್​ ಲ್ಯಾನಿಂಗ್​ ಅಜೇಯ 21)

Exit mobile version