ಮುಂಬಯಿ: ನಾಯಕಿ ಅಲಿಸ್ಸಾ ಹೀಲಿ(58) ಮತ್ತು ತಹ್ಲಿಯಾ ಮೆಗ್ರಾತ್(50) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕೂಟದ ಅಜೇಯ ತಂಡ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಯುಪಿ ವಾರಿಯರ್ಸ್(UP Warriorz) 159 ರನ್ ಬಾರಿಸಿ ಸವಾಲೊಡ್ಡಿದೆ.
ಮುಂಬಯಿಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಮಹಿಳಾ ಪ್ರೀಮಿಯರ್ ಲೀಗ್‌ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಪಿ ವಾರಿಯರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ಎದುರಾಳಿ ಮುಂಬೈ ಇಂಡಿಯನ್ಸ್ ಗೆಲುವಿಗೆ 160 ರನ್ ಬಾರಿಸಬೇಕಿದೆ.
ಆರ್‌ಸಿಬಿ ವಿರುದ್ಧದ ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕಿ ಅಲಿಸ್ಸಾ ಹೀಲಿ(Alyssa Healy) ಈ ಪಂದ್ಯದಲ್ಲಿಯೂ ನಾಯಕತ್ವದ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದ ಆಟಗಾರ್ತಿ ತಹ್ಲಿಯಾ ಮೆಗ್ರಾತ್(Tahlia McGrath) ಜತೆಗೂಡಿ ತಾಳ್ಮೆಯುತ ಆಟದ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಆದರೆ ದೇವಿಕಾ ವೈದ್ಯ(6) ಮತ್ತು ಕಿರಣ್ ನವಗಿರೆ(17) ಅಗ್ಗಕ್ಕೆ ಔಟಾಗಿ ನಿರಾಸೆ ಅನುಭವಿಸಿದರು.
ಮುಂಬೈಯ ಬಿಗು ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಹೀಲಿ ಮತ್ತು ಮೆಗ್ರಾತ್ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಪ್ರತಿ ಎಸೆತವೊಂದಕ್ಕೆ ರನ್ ಗಳಿಸಿದ ಉಭಯ ಆಟಗಾರ್ತಿಯರು ಅರ್ಧಶತಕ ಬಾರಿಸಿ ಮಿಂಚಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. 58 ರನ್ ಗಳಿಸಿದ ವೇಳೆ ಹೀಲಿ ಅವರು ಸೈಕಾ ಇಶಾಕ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಒಟ್ಟು 46 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.
ಇದನ್ನೂ ಓದಿ WPL 2023: ಮೂರು ಕೋಟಿ ರೂ. ನೀರಲ್ಲಿ ಹೋಮ; ಸ್ಮೃತಿ ಮಂಧಾನಾ ಟ್ರೋಲ್ ಮಾಡಿದ ನೆಟ್ಟಿಗರು
ಅಲಿಸ್ಸಾ ಹೀಲಿ ವಿಕೆಟ್ ಪತನಗೊಂಡು ಒಂದು ರನ್ ಅಂತರದಲ್ಲಿ ತಹ್ಲಿಯಾ ಮೆಗ್ರಾತ್ ವಿಕೆಟ್ ಕೂಡ ಪತನಗೊಂಡಿದು. ಒಂದೇ ಓವರ್‌ನಲ್ಲಿ ಸೈಕಾ ಇಶಾಕ್ ಯುಪಿ ತಂಡಕ್ಕೆ ಅವಳಿ ಆಘಾತವಿಕ್ಕಿದರು. ತಹ್ಲಿಯಾ ಮೆಗ್ರಾತ್ 37 ಎಸೆತದಿಂದ ಭರ್ತಿ 50 ರನ್ ಗಳಿಸಿದರು. ಉಭಯ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ತಂಡದ ಮೊತ್ತವೂ ಕುಂಟಿತಗೊಂಡಿತು. ಆ ಬಳಿಕ ಬಂದ ಆಟಗಾರ್ತಿರು ಬೇಗನೆ ವಿಕೆಟ್ ಒಪ್ಪಿಸಿ ತಂಡದ ದೊಡ್ಡ ಮೊತ್ತದ ಯೋಜನೆಗೆ ಅಡ್ಡಿಪಡಿಸಿದರು. ಮುಂಬೈ ಪರ ಸೈಕಾ ಇಶಾಕ್ ನಾಲ್ಕು ಓವರ್ ಎಸೆದು 33 ರನ್ ವೆಚ್ಚದಲ್ಲಿ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159( ಅಲಿಸ್ಸಾ ಹೀಲಿ 59, ತಹ್ಲಿಯಾ ಮೆಗ್ರಾತ್ 50, ಸೈಕಾ ಇಶಾಕ್ 33ಕ್ಕೆ 3)