Site icon Vistara News

WPL 2023: ಗೆಲುವಿನ ನಾಗಾಲೋಟ ಮುಂದುವರಿಸಿದ ಮುಂಬೈ; ಯುಪಿ ವಿರುದ್ಧ 8 ವಿಕೆಟ್‌ ಜಯ

WPL 2023: Mumbai continue their winning streak; 8 wicket win against UP

WPL 2023: Mumbai continue their winning streak; 8 wicket win against UP

ಮುಂಬಯಿ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ(WPL 2023) ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಭಾನುವಾರ ನಡೆದ ಯುಪಿ ವಾರಿಯರ್ಸ್‌(UP Warriorz) ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ಆಡಿದ 4 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಮುಂಬಯಿಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಯುಪಿ ವಾರಿಯರ್ಸ್‌ ನಾಯಕಿ ಅಲಿಸ್ಸಾ ಹೀಲಿ(58) ಮತ್ತು ತಹ್ಲಿಯಾ ಮೆಗ್ರಾತ್(50) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 17.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 164 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೂ ಈ ಗುರಿ ತಲುಪಲು ಅಷ್ಟು ಸುಲಭವಾಗಿರಲಿಲ್ಲ. ವಿಕೆಟ್‌ ಕಳೆದುಕೊಳ್ಳದಿದ್ದರೂ ತಂಡದ ರನ್‌ ಗಳಿಗೆ ನಿಧಾನಗತಿಯಿಂದ ಕೂಡಿತ್ತು. ಕಳೆದ ಮೂರು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ವೆಸ್ಟ್‌ ಇಂಡೀಸ್‌ ತಂಡ ಆಟಗಾರ್ತಿ ಹೇಲಿ ಮ್ಯಾಥ್ಯೂಸ್‌ ಈ ಪಂದ್ಯದಲ್ಲಿ ರನ್‌ ಗಳಿಸಲು ಪರದಾಡಿದರು. 17 ಎಸೆತ ಎದುರಿಸಿ 12 ರನ್‌ಗೆ ಆಟ ಮುಗಿಸಿದರು. ಯಾಸ್ತಿಕಾ ಭಾಟಿಯಾ 42 ರನ್‌ ಗಳಿಸಿದರು.

ಅರ್ಧಶತಕ ಬಾರಿಸಿದ ಕೌರ್‌

ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ನ್ಯಾಟ್ ಸಿವರ್-ಬ್ರಂಟ್ ಜತೆಗೂಡಿ ಉತ್ತಮ ಇನಿಂಗ್ಸ್‌ ಕಟ್ಟಿದರು. ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟ ಕೌರ್‌ ಬಳಿಕ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ಅರ್ಧಶತಕ ಬಾರಿಸಿ ಮಿಂಚಿದರು. ಒಟ್ಟು 33 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ ಅಜೇಯ 53 ರನ್‌ ಗಳಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ನ್ಯಾಟ್ ಸಿವರ್-ಬ್ರಂಟ್ 31 ಎಸೆತಗಳಿಂದ 6 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ ಅಜೇಯ 45 ರನ್‌ ಬಾರಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಯುಪಿ ಪರ ನಾಯಕಿ ಅಲಿಸ್ಸಾ ಹೀಲಿ(58) ಮತ್ತು ತಹ್ಲಿಯಾ ಮೆಗ್ರಾತ್(50) ಅರ್ಧಶತಕ ಬಾರಿಸಿ ಮಿಂಚಿದ್ದರು. ಮುಂಬೈ ಪರ ಬೌಲಿಂಗ್‌ನಲ್ಲಿ ಸೈಕಾ ಇಶಾಕ್ ನಾಲ್ಕು ಓವರ್‌ ಎಸೆದು 33 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು.

ತಂಡಕ್ಕೆ ಆಸರೆಯಾದ ಅಲಿಸ್ಸಾ ಹೀಲಿ ತಹ್ಲಿಯಾ ಮೆಗ್ರಾತ್

ಆರ್‌ಸಿಬಿ ವಿರುದ್ಧದ ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕಿ ಅಲಿಸ್ಸಾ ಹೀಲಿ(Alyssa Healy) ಈ ಪಂದ್ಯದಲ್ಲಿಯೂ ನಾಯಕತ್ವದ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದ ಆಟಗಾರ್ತಿ ತಹ್ಲಿಯಾ ಮೆಗ್ರಾತ್(Tahlia McGrath) ಜತೆಗೂಡಿ ತಾಳ್ಮೆಯುತ ಆಟದ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಆದರೆ ದೇವಿಕಾ ವೈದ್ಯ(6) ಮತ್ತು ಕಿರಣ್ ನವಗಿರೆ(17) ಅಗ್ಗಕ್ಕೆ ಔಟಾಗಿ ನಿರಾಸೆ ಅನುಭವಿಸಿದರು.

ಮುಂಬೈಯ ಬಿಗು ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಹೀಲಿ ಮತ್ತು ಮೆಗ್ರಾತ್, ಪ್ರತಿ ಎಸೆತವೊಂದಕ್ಕೆ ರನ್‌ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಜತೆಗೆ ಉಭಯ ಆಟಗಾರ್ತಿಯರು ಅರ್ಧಶತಕ ಬಾರಿಸಿ ಮಿಂಚಿದರು. ಆದರೆ 58 ರನ್‌ ಗಳಿಸಿದ ವೇಳೆ ಹೀಲಿ ಅವರು ಸೈಕಾ ಇಶಾಕ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್‌ ಕೈಚೆಲ್ಲಿದರು. ಒಟ್ಟು 46 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದರು.

ಅಲಿಸ್ಸಾ ಹೀಲಿ ವಿಕೆಟ್‌ ಪತನಗೊಂಡು ಒಂದು ರನ್‌ ಅಂತರದಲ್ಲಿ ತಹ್ಲಿಯಾ ಮೆಗ್ರಾತ್ ವಿಕೆಟ್‌ ಕೂಡ ಪತನಗೊಂಡಿದು. ಒಂದೇ ಓವರ್‌ನಲ್ಲಿ ಸೈಕಾ ಇಶಾಕ್ ಯುಪಿ ತಂಡಕ್ಕೆ ಅವಳಿ ಆಘಾತವಿಕ್ಕಿದರು. ತಹ್ಲಿಯಾ ಮೆಗ್ರಾತ್ 37 ಎಸೆತದಿಂದ ಭರ್ತಿ 50 ರನ್‌ ಗಳಿಸಿದರು. ಉಭಯ ಆಟಗಾರ್ತಿಯರ ವಿಕೆಟ್‌ ಪತನದ ಬಳಿಕ ತಂಡದ ಮೊತ್ತವೂ ಕುಂಟಿತಗೊಂಡಿತು. ಆ ಬಳಿಕ ಬಂದ ಆಟಗಾರ್ತಿರು ಬೇಗನೆ ವಿಕೆಟ್‌ ಒಪ್ಪಿಸಿ ತಂಡದ ದೊಡ್ಡ ಮೊತ್ತದ ಯೋಜನೆಗೆ ಅಡ್ಡಿಪಡಿಸಿದರು.

ಇದನ್ನೂ ಓದಿ WPL 2023: ಮೂರು ಕೋಟಿ ರೂ. ನೀರಲ್ಲಿ ಹೋಮ; ಸ್ಮೃತಿ ಮಂಧಾನಾ ಟ್ರೋಲ್​ ಮಾಡಿದ ನೆಟ್ಟಿಗರು

ಇದನ್ನೂ ಓದಿ WPL 2023: ಮೂರು ಕೋಟಿ ರೂ. ನೀರಲ್ಲಿ ಹೋಮ; ಸ್ಮೃತಿ ಮಂಧಾನಾ ಟ್ರೋಲ್​ ಮಾಡಿದ ನೆಟ್ಟಿಗರು

ಸಂಕ್ಷಿಪ್ತ ಸ್ಕೋರ್‌: ಯುಪಿ ವಾರಿಯರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 159( ಅಲಿಸ್ಸಾ ಹೀಲಿ 59, ತಹ್ಲಿಯಾ ಮೆಗ್ರಾತ್ 50, ಸೈಕಾ ಇಶಾಕ್ 33ಕ್ಕೆ 3)

ಮುಂಬೈ ಇಂಡಿಯನ್ಸ್‌: 17.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 164( ಹರ್ಮನ್‌ಪ್ರೀತ್‌ ಕೌರ್‌ ಅಜೇಯ 53, ನ್ಯಾಟ್ ಸಿವರ್-ಬ್ರಂಟ್ ಅಜೇಯ 45, ಯಾಸ್ತಿಕಾ ಭಾಟಿಯಾ 42, ಸೋಫಿ ಎಕ್ಲೆಸ್ಟೋನ್ 30ಕ್ಕೆ 1) ಪಂದ್ಯಶ್ರೇ಼ಷ್ಠ: ಹರ್ಮನ್‌ಪ್ರೀತ್‌ ಕೌರ್‌

Exit mobile version