Site icon Vistara News

WPL 2023: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್​

WPL 2023: Mumbai Indians crowned champions in maiden edition of Women's Premier League

WPL 2023: Mumbai Indians crowned champions in maiden edition of Women's Premier League

ಮುಂಬಯಿ: ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸತೊಂದು ಸಂಚಲನ ಮೂಡಿಸಿದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಭಾನುವಾರ ತೆರೆ ಬಿದ್ದಿದೆ. ರೋಚಕವಾಗಿ ಸಾಗಿದ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧ ಮುಂಬೈ ಇಂಡಿಯನ್ಸ್(Mumbai Indians)​ ತಂಡ 7 ವಿಕೆಟ್​ಗಳ ಗೆಲುವು ದಾಖಲಿಸಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಆಸ್ಟ್ರೇಲಿಯಾಕ್ಕೆ 5 ಟಿ20 ವಿಶ್ವಕಪ್‌ ಮತ್ತು ಚೊಚ್ಚಲ ವನಿತಾ ಬಿಗ್‌ ಬಾಶ್‌ ಲೀಗ್‌ನಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಏರಿಸಿದ ಹೆಗ್ಗಳಿಕೆ ಸಾಧಿಸಿದ್ದ, ಮೆಗ್​ ಲ್ಯಾನಿಂಗ್​ ಇಲ್ಲಿ ಕಪ್​ ಗೆಲ್ಲಲು ವಿಫಲರಾದರು.

ಮುಂಬಯಿಯ ಬ್ರೆಬೋರ್ನ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಮಣಿಗಳ ಈ ಪ್ರಶಸ್ತಿ ಕದನದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ನೀರಸ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 131 ರನ್​ ಬಾರಿಸಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 19.3​ ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 134 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಈ ಪಂದ್ಯಕ್ಕೆ ಐಪಿಎಲ್​ನ​ ಯಶಸ್ವಿ ತಂಡವಾದ ರೋಹಿತ್​ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್​ ಕೂಡ ಸಾಕ್ಷಿಯಾಯಿತು.

ಚೇಸಿಂಗ್​ ವೇಳೆ ಮುಂಬೈ ತಂಡವೂ ಡೆಲ್ಲಿ ತಂಡದಂತೆ ಆರಂಭಿಕ ಆಘಾತ ಎದುರಿಸಿತು. ಯಾಸ್ತಿಕಾ ಭಾಟಿಯ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ವಿಂಡೀಸ್​ನ ಸ್ಫೋಟಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ ಕೂಡ 4 ರನ್​ಗೆ ಆಟ ಮುಗಿಸಿದರು. ಈ ವೇಳೆ ಡೆಲ್ಲಿ ಅಲ್ಪ ಮೊತ್ತವನ್ನೂ ಉಳಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯೊಂದು ಮೂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ನ್ಯಾಟ್ ಸ್ಕಿವರ್​-ಬ್ರಂಟ್​ ಮತ್ತು ನಾಯಕಿ ಹರ್ಮನ್​ಪ್ರೀತ್​ ಕೌರ್​ ಸೇರಿಕೊಂಡು ಉತ್ತಮ ಜತೆಯಾಟ ನಡೆಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಅರ್ಧಶತಕ ಬಾರಿಸಿ ಮಿಂಚಿದ ನ್ಯಾಟ್​ ಸ್ಕಿವರ್​-ಬ್ರಂಟ್​ ಅಜೇಯ 60 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮ ಹಂತದಲ್ಲಿ ಮುಂಬೈ ಗೆಲುವಿಗೆ 4 ಎಸೆತಗಳ ಮುಂದೆ 2 ರನ್​ ತೆಗೆಯುವ ಸವಾಲು ಎದುರಾಗಿ ಪಂದ್ಯ ರೋಚಕ ತಿರುವು ಪಡೆಯಿತು. ಆದರೆ ಮುಂದಿನ ಎಸೆತವನ್ನು ಸ್ಕಿವರ್​-ಬ್ರಂಟ್ ಯಾವುದೇ ಒತ್ತಡವಿಲ್ಲದೆ ರಿವರ್ಸ್​ ಸ್ವೀಪ್​ ಮೂಲಕ ಬೌಂಡರಿ ಬಾರಿಸಿ ತಂಡದ ಗೆಲುವು ಸಾರಿದರು. ಒಟ್ಟು 55 ಎಸೆತ ಎದುರಿಸಿದ ಅವರು 7 ಬೌಂಡರಿ ಬಾರಿಸಿದರು. ನಾಯಕಿ ಕೌರ್​ 37 ರನ್​ ಗಳಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು. ಡೆಲ್ಲಿ ಕ್ಯಾಪಿಟಲ್ಸ್​ ಪರ ಮರಿಜಾನೆ ಕಾಪ್​ ಮತ್ತು ಜೋನಾಸನ್​ ತಲಾ ಒಂದು ವಿಕೆಟ್​ ಕಿತ್ತರು.

ಇದನ್ನೂ ಓದಿ WPL 2023: ಮಹಿಳಾ ಪ್ರೀಮಿಯರ್​ ಲೀಗ್​ ಫೈನಲ್​ ಪಂದ್ಯ ವೀಕ್ಷಿಸಿದ ಪುರುಷರ ಮುಂಬೈ ಇಂಡಿಯನ್ಸ್​ ತಂಡ

ನಾಟಕೀಯ ಕುಸಿತ ಕಂಡ ಡೆಲ್ಲಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ಆರಂಭಿಕ ಆಘಾತ ಎದುರಿಸಿತು. ಒಂದೇ ಓವರ್​ನಲ್ಲಿ ಡೇಂಜರಸ್​ ಬ್ಯಾಟರ್​ಗಳಾದ ಶಫಾಲಿ ವರ್ಮ ಮತ್ತು ಅಲೀಸ್​ ಕಾಪ್ಸಿ ವಿಕೆಟ್​ ಕಿತ್ತು ಮಿಂಚಿದರು. ಶಫಾಲಿ ವರ್ಮಾ 4 ಎಸೆತಗಳಲ್ಲಿ 1 ಫೋರ್​ ಹಾಗೂ 1 ಸಿಕ್ಸರ್​ ಸಮೇತ 11 ರನ್​ ಬಾರಿಸಿ ಔಟಾದರು. ಅಲೀಸ್​ ಕಾಪ್ಸಿ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ ರೋಡ್ರಿಗಸ್​ (9) ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಇದರಿಂದಾಗಿ ದೊಡ್ಡ ಮೊತ್ತ ಪೇರಿಸುವ ಡೆಲ್ಲಿ ಆಸೆ ಭಗ್ನವಾಯಿತು.

Exit mobile version