Site icon Vistara News

WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ

WPL 2023: RCB ends campaign with defeat

WPL 2023: RCB ends campaign with defeat

ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಸ್ಮೃತಿ ಮಂಧಾನ ಸಾರಥ್ಯದ ಆರ್​ಸಿಬಿ(Royal Challengers Bangalore) ತಂಡ ಇದೀಗ ಸೋಲಿನೊಂದಿಗೆಯೇ ತನ್ನ ಅಭಿಯಾನವನ್ನು ಮುಗಿಸಿದೆ. ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಅಂತಿಮ ಲೀಗ್​ ಪಂದ್ಯದಲ್ಲಿ 4 ವಿಕೆಟ್​ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್​ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಮುಂಬಯಿಯ ಡಿ.ವೈ. ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡ್ಡರ್​ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ರಿಚಾ ಘೋಷ್​ ಮತ್ತು ಎಲ್ಲಿಸ್​ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಬಾರಿಸಿತು. ಜಬಾಬಿತ್ತ ಮುಂಬೈ ಇಂಡಿಯನ್ಸ್​ 16.3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 129 ರನ್​ ಬಾರಿಸಿ ಗೆಲುವು ದಾಖಲಿಸಿತು.

ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈಗೆ ಯಾಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್​ಗೆ 53 ರನ್​ಗಳ ಜತೆಯಾಟ ನಡೆಸಿತು. ಯಾಸ್ತಿಕಾ 30 ರನ್​ ಗಳಿಸಿದರೆ, ಮ್ಯಾಥ್ಯೂಸ್ 24 ರನ್​ ಬಾರಿಸಿದರು. ಉಭಯ ಆಟಗಾರ್ತಿಯ ವಿಕೆಟ್​ ಪತನದ ಬೆನ್ನಲ್ಲೇ ತಂಡ ನಾಯಕೀಯ ಕುಸಿತ ಕಂಡಿತು. ನಾಯಕಿ ಹರ್ಮನ್​ಪ್ರೀತ್​ ಕೌರ್​(2), ನ್ಯಾಟ್​ ಸ್ಕಿವರ್​-ಬ್ರಂಟ್​ (13) ಅಲ್ಪ ಮೊತ್ತಕ್ಕೆ ಔಟಾದರು. ತಂಡದ ಮೊತ್ತ 74 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಮುಂಬೈ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು.

ನಾಟಕೀಯ ಕುಸಿತ ಕಂಡ ಮುಂಬೈ ತಂಡಕ್ಕೆ ಬೌಲಿಂಗ್​ನಲ್ಲಿ ಮೂರು ವಿಕೆಟ್​ ಕಿತ್ತು ಪ್ರಮುಖ ಪಾತ್ರ ನಿರ್ವಹಿಸಿದ್ದ ಅಮೇಲಿಯಾ ಕೆರ್​ ಮತ್ತು ಪೂಜಾ ವಸ್ತ್ರಾಕರ್​ ಕೆಳ ಕ್ರಮಾಂಕದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ತಂಡದ ಗೆಲುವಿಗೆ 6 ರನ್​ ಅಗತ್ಯವಿದ್ದಾಗ ಪೂಜಾ ವಿಕೆಟ್ ಕೈಚೆಲ್ಲಿದರು. ಅವರು 19 ರನ್ ಗಳಿಸಿದರು.​ ಅಮೇಲಿಯಾ ಕೆರ್​ ಅಜೇಯ ​31 ರನ್​ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಅಜೇಯ ಇನಿಂಗ್ಸ್​ ಆಟದ ವೇಳೆ 4 ಬೌಂಡರಿ ಸಿಡಿಯಿತು.

ಮಂದ ಗತಿಯ ಬ್ಯಾಟಿಂಗ್​ ನಡೆಸಿದ ಮಂಧಾನ ಪಡೆ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್​ ಜೈಂಟ್ಸ್​ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್​ನ ಸ್ಟಾರ್​ ಆಲ್​ ರೌಂಡರ್​ ಸೋಫಿ ಡಿವೈನ್​ ಅವರು ಈ ಪಂದ್ಯದಲ್ಲಿ ರನೌಟ್​ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.

ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್​ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್​ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಆರಂಭಿಕ ಆಟಗಾರ್ತಿಯರ ವಿಕೆಟ್​ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್‌ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್​ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್​ ನೀಡಲಿಲ್ಲ. ಹೀತರ್​ ನೈಟ್​ ಮತ್ತು ಕನಿಕಾ ಅಹುಜಾ ತಲಾ 12 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್‌ ಪೆರ್ರಿ ಕೂಡ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್​ ಬಾರಿಸಿದರು. ಸ್ಕಿವರ್‌ ಬ್ರಂಟ್‌ 24 ರನ್​ಗೆ 2 ವಿಕೆಟ್​ ಉರುಳಿಸಿದರು.

ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್​ ಸುಲಭ ಜಯ

ಅಂತಿಮ ಹಂತದಲ್ಲಿ ರಿಚಾ ಘೋಷ್​​ ಬಿರುಸಿನ ಬ್ಯಾಟಿಂಗ್​ ನಡೆಸಿದ ಪರಿಣಾಮ ಆರ್​ಸಿಬಿ 100ರ ಗಡಿ ದಾಟಿತು. ಕ್ರೀಸ್​ ಗಿಳಿದ ಆರಂಭದಿಂದಲೇ ಸಿಕ್ಸರ್​, ಬೌಂಡರಿಗಳ ಮೂಲಕ ಮುಂಬೈ ಬೌಲರ್​ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್​ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್​ ನೀಡಿದರು. ಅವರ ವಿಕೆಟ್​ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್​ ಬಾರಿಸಿ 29 ರನ್​ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್​ 22 ರನ್​ ವೆಚ್ಚದಲ್ಲಿ ಮೂರು ವಿಕೆಟ್​ ಪಡೆದರು. ಸೈಕಾ ಇಶಾಖ್‌ ಒಂದು ವಿಕೆಟ್​ ಪಡೆದರು.

ಸಂಕ್ಷಿಪ್ತ ಸ್ಕೋರ್​: ಆರ್​ಸಿಬಿ; 20 ಓವರ್​ಗಳಲ್ಲಿ 9 ವಿಕೆಟ್​ಗೆ 125( ಎಲ್ಲಿಸ್‌ ಪೆರ್ರಿ 29, ರಿಚಾ ಘೋಷ್​ 29, ಅಮೇಲಿಯಾ ಕೆರ್​ 22ಕ್ಕೆ 3). ಮುಂಬೈ ಇಂಡಿಯನ್ಸ್: 16.3 ಓವರ್​ಗಳಲ್ಲಿ 6 ವಿಕೆಟ್​ಗೆ 129( ಅಕೇಲಿಯಾ ಕೆರ್​ ಅಜೇಯ 31, ಮ್ಯಾಥ್ಯೂಸ್​ 24, ಯಾಸ್ತಿಕಾ ಭಾಟಿಯಾ 30)

Exit mobile version