ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಮವಾರದ ಮಹಿಳಾ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು 150 ರನ್ ಗಳಿಸಿ ಸಾಧಾರಣ ಮೊತ್ತದ ಸವಾಲು ನೀಡಿದೆ.
ನವಿ ಮುಂಬಯಿನ ಡಿ.ವೈ. ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 151 ರನ್ ಬಾರಿಸಬೇಕಿದೆ.
ಕೂಟದಲ್ಲಿ ದುಬಾರಿ ಮೊತ್ತ ಪಡೆದ ಆಟಗಾರ್ತಿ ಸ್ಮೃತಿ ಮಂಧಾನಾ ಈ ಪಂದ್ಯದಲ್ಲಿಯೂ ಬ್ಯಾಟಿಂಗ್ ಮಂದಹಾಸ ಮೂಡಿಸುವಲ್ಲಿ ವಿಫಲರಾದರು. ಕೇವಲ 8 ರನ್ಗೆ ಔಟಾಗುವ ಮೂಲಕ ಆಡಿದ ಐದೂ ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು.
ಇದನ್ನೂ ಓದಿ WPL 2023: ಗೆಲುವಿನ ನಾಗಾಲೋಟ ಮುಂದುವರಿಸಿದ ಮುಂಬೈ; ಯುಪಿ ವಿರುದ್ಧ 8 ವಿಕೆಟ್ ಜಯ
ಆರ್ಸಿಬಿಗೆ ಆಸರೆಯಾದ ಎಲ್ಲಿಸ್ ಪೆರ್ರಿ
ಡೆಲ್ಲಿಯ ಫಾತಕ ಬೌಲಿಂಗ್ಗೆ ರನ್ ಗಳಿಸಲು ತಿಣುಕಾಡಿದ ಆರ್ಸಿಬಿ ತಂಡಕ್ಕೆ ಆಸೀಸ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ಆಸರೆಯಾದರು. ಆರಂಭದಲ್ಲಿ ಎಸೆತವೊಂದಕ್ಕೆ ರನ್ ಗಳಿಸುತ್ತಿದ್ದ ಅವರು ಅಂತಿಮ 4 ಓವರ್ಗಳ ಆಟದ ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರ ಈ ಅಜೇಯ ಅರ್ಧಶತಕದ ಬ್ಯಾಟಿಂಗ್ ಸಾಹಸದಿಂದ ಆರ್ಸಿಬಿ ನೂರರ ಗಡಿ ದಾಟುವಲ್ಲಿ ಯಶಸ್ಸು ಕಂಡಿತು.
ಎಲ್ಲಿಸ್ ಪೆರ್ರಿಗೆ ಉತ್ತಮ ಸಾಥ್ ನೀಡಿದ ರಿಚಾ ಘೋಷ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನರೆವಾದರು. ಆದರೆ ಶಿಖಾ ಪಾಂಡೆ ಅವರ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಎಡವಿದ ಅವರು ಕೀಪರ್ ತನಿಯಾ ಭಾಟಿಯಾಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. 16 ಎಸೆತ ಎದುರಿಸಿದ ಅವರು ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 37 ರನ್ ಚಚ್ಚಿದರು.
ಎಲ್ಲಿಸ್ ಪೆರ್ರಿ 52ಎಸೆತ ಎದುರಿಸಿ ಅಜೇಯ 67 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು. ಡೆಲ್ಲಿ ಪರ ಅನುಭವಿ ಬೌಲರ್ ಶಿಖಾ ಪಾಂಡೆ 4 ಓವರ್ಗೆ 23 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಕಳೆದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ಮರಿಜಾನೆ ಕಾಪ್ ಈ ಪಂದ್ಯದಲ್ಲಿ ವಿಕೆಟ್ ಪಡೆಯದಿದ್ದರೂ ನಾಲ್ಕು ಓವರ್ನಲ್ಲಿ ಒಂದು ಮೇಡನ್ ಸಹಿತ 18 ರನ್ ಬಿಟ್ಟುಕೊಟ್ಟ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು; 20 ಓವರ್ಗಳಲ್ಲಿ 4 ವಿಕೆಟ್ಗೆ 150 (ಎಲ್ಲಿಸ್ ಪೆರ್ರಿ ಅಜೇಯ 67, ರಿಚಾ ಘೋಷ್ 37, ಶಿಖಾ ಪಾಂಡೆ 23ಕ್ಕೆ 3)