Site icon Vistara News

WPL 2023: ಮುಂಬೈ ಬೌಲಿಂಗ್​ ದಾಳಿಗೆ ಬೆದರಿ 125ಕ್ಕೆ ಕುಸಿದ ಆರ್​ಸಿಬಿ

WPL 2023: RCB reduced to 125 under threat of Mumbai bowling attack

WPL 2023: RCB reduced to 125 under threat of Mumbai bowling attack

ಮುಂಬಯಿ: ಮುಂಬೈ ಇಂಡಿಯನ್ಸ್​ ತಂಡದ ಸಂಘಟಿತ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗಳವಾರದ ಮಹಿಳಾ ಪ್ರೀಮಿಯರ್​ ಲೀಗ್​ನ(WPL 2023) ಹಗಲು ಪಂದ್ಯದಲ್ಲಿ 125 ರನ್​ ಗಳಿಸಿ ಸವಾಲೊಡ್ಡಿದೆ.

ಮುಂಬಯಿಯ ಡಿ.ವೈ. ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್​ ಲೀಗ್​ನ ದಿನದ ಮೊದಲ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಬಾರಿಸಿದೆ. ಮುಂಬೈ ಗೆಲುವಿಗೆ 126 ರನ್​ ಬಾರಿಸಬೇಕಿದೆ.

ಗುಜರಾತ್​ ಜೈಂಟ್ಸ್​ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್​ನ ಸ್ಟಾರ್​ ಆಲ್​ ರೌಂಡರ್​ ಸೋಫಿ ಡಿವೈನ್​ ಅವರು ಈ ಪಂದ್ಯದಲ್ಲಿ ರನೌಟ್​ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.

ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್​ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್​ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಆರಂಭಿಕ ಆಟಗಾರ್ತಿಯರ ವಿಕೆಟ್​ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್‌ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್​ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್​ ನೀಡಲಿಲ್ಲ. ಹೀತರ್​ ನೈಟ್​ ಮತ್ತು ಕನಿಕಾ ಅಹುಜಾ ತಲಾ 12 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್‌ ಪೆರ್ರಿ ಕೂಡ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್​ ಬಾರಿಸಿದರು. ಸ್ಕಿವರ್‌ ಬ್ರಂಟ್‌ 24 ರನ್​ಗೆ 2 ವಿಕೆಟ್​ ಉರುಳಿಸಿದರು.

ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್​ ಸುಲಭ ಜಯ

ಅಂತಿಮ ಹಂತದಲ್ಲಿ ರಿಚಾ ಘೋಷ್​​ ಬಿರುಸಿನ ಬ್ಯಾಟಿಂಗ್​ ನಡೆಸಿದ ಪರಿಣಾಮ ಆರ್​ಸಿಬಿ 100ರ ಗಡಿ ದಾಟಿತು. ಕ್ರೀಸ್​ ಗಿಳಿದ ಆರಂಭದಿಂದಲೇ ಸಿಕ್ಸರ್​, ಬೌಂಡರಿಗಳ ಮೂಲಕ ಮುಂಬೈ ಬೌಲರ್​ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್​ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್​ ನೀಡಿದರು. ಅವರ ವಿಕೆಟ್​ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್​ ಬಾರಿಸಿ 29 ರನ್​ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್​ 22 ರನ್​ ವೆಚ್ಚದಲ್ಲಿ ಮೂರು ವಿಕೆಟ್​ ಪಡೆದರು. ಸೈಕಾ ಇಶಾಖ್‌ ಒಂದು ವಿಕೆಟ್​ ಪಡೆದರು.

ಸಂಕ್ಷಿಪ್ತ ಸ್ಕೋರ್​: ಆರ್​ಸಿಬಿ; 20 ಓವರ್​ಗಳಲ್ಲಿ 9 ವಿಕೆಟ್​ಗೆ 125( ಎಲ್ಲಿಸ್‌ ಪೆರ್ರಿ 29, ರಿಚಾ ಘೋಷ್​ 29, ಅಮೇಲಿಯಾ ಕೆರ್​ 22ಕ್ಕೆ 3)

Exit mobile version