ಮುಂಬಯಿ: ಮಹಿಳಾ ದಿನಾಚರಣೆಯ ದಿನದಂದು(ಮಾರ್ಚ್ 8) ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(WPL 2023) ಆರ್ಸಿಬಿ(Royal Challengers Bangalore) ಮತ್ತು ಗುಜರಾತ್ ಜೈಂಟ್ಸ್(Gujarat Giants) ಪಂದ್ಯಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಪ್ರದರ್ಶನದ ವಿಚಾರದಲ್ಲಿ ಇತ್ತಂಡಗಳು ಒಂದೇ ದೋಣಿಯ ಪಯಣಿಗರು. ಆಡಿದ ಎರಡೂ ಪಂದ್ಯಗಳಲ್ಲಿಯೂ ಸೋಲು ಕಂಡಿದ್ದಾರೆ.
ಈ ಪಂದ್ಯದಲ್ಲಿ ಒಂದು ತಂಡ ತನ್ನ ಸೋಲಿನ ಸರಪಳಿಯನ್ನು ಕಳೆದುಕೊಂಡರೆ ಮತ್ತೊಂದು ತಂಡ ಹ್ಯಾಟ್ರಿಕ್ಸ್ ಸೋಲಿನ ಅವಮಾನಕ್ಕೆ ಸಿಲುಕಲಿದೆ. ಆದರೆ ಈ ತಂಡ ಯಾವುದೆಂದು ಬುಧವಾರ ರಾತ್ರಿ ಉತ್ತರ ಸಿಗಲಿದೆ. ಬ್ಯಾಟಿಂಗ್ ವಿಚಾರದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಆರ್ಸಿಬಿ ಬಲಿಷ್ಠವಾಗಿದೆ. ಆದರೆ ಇತ್ತಂಡಗಳಿಗಿಗೂ ಬೌಲಿಂಗ್ ದೊಡ್ಡ ಚಿಂತೆಯಾಗಿದೆ. ಆಡಿದ ಎರಡು ಪಂದ್ಯಗಳಲ್ಲಿಯೂ ತಂಡದ ಸೋಲಿಗೆ ಕಾರಣವಾದದ್ದು ಬೌಲಿಂಗ್. ಹೀಗಾಗಿ ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಸುಧಾರಣೆ ಕಾಣಲೇ ಬೇಕು.
ಗುಜರಾತ್ಗೆ ಗಾಯದ ಚಿಂತೆ
ಗುಜರಾತ್ ತಂಡಕ್ಕೆ ಗಾಯದ ಚಿಂತೆ ಕಾಡಿದೆ. ತಂಡದ ನಾಯಕಿ ಬೆತ್ ಮೂನಿ ಮುಂಬೈ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗಾಯಗೊಂಡು ದ್ವಿತೀಯ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇವರ ಅನುಸ್ಥಿತಿಯಲ್ಲಿ ಸ್ನೇಹ್ ರಾಣಾ ತಂಡವನ್ನು ಮುನ್ನಡೆಸಿದ್ದರು. ಇದೀಗ ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ವೆಸ್ಟ್ ಇಂಡೀಸ್ನ ಹಾರ್ಡ್ ಹಿಟ್ಟರ್ ಡಿಯಾಂಡ್ರಾ ಡಾಟಿನ್ ಗಾಯಗೊಂಡು ಈಗಾಗಲೇ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಇವರೆಲ್ಲರ ಅನುಪಸ್ಥಿತಿಯ ಮಧ್ಯೆಯೂ ಗುಜರಾತ್ ಗೆದ್ದರೆ ನಿಜಕ್ಕೂ ಮೆಚ್ಚಲೇ ಬೇಕು.
ಆರ್ಸಿಬಿ ತಂಡ ಉತ್ತಮ ಆರಂಭವನ್ನು ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಎಡವುತ್ತಿದೆ. ನಾಯಕಿ ಸ್ಮೃತಿ ಮಂಧಾನಾ ಸ್ಫೋಟಕ ಆರಂಭ ಒದಗಿಸಿದರೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುವ ಆಟಗಾರ್ತಿಯರ ಕೊರತೆ ಎದ್ದು ಕಾಣುತ್ತಿದೆ. ಟಿ20 ವಿಶ್ವ ಕಪ್ನಲ್ಲಿ ಮಿಂಚಿದ ರಿಚಾ ಘೋಷ್ ಬ್ಯಾಟ್ ಇಲ್ಲಿ ಸದ್ದು ಮಾಡುತ್ತಿಲ್ಲ. ಜತೆಗೆ ರೇಣುಕಾ ಸಿಂಗ್ ಕೂಡ ದುಬಾರಿಯಾಗಿ ಪರಿಣಮಿಸುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.