ಮುಂಬಯಿ: ತೀವ್ರ ಕುತೂಹಲ ಮೂಡಿಸಿದ ಚೊಚ್ಚಲ(WPL) ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯ ಕಂಡ ಬೆನ್ನಲ್ಲೇ ಇದೀಗ ಬಿಸಿಸಿಐ ಈ ಟೂರ್ನಿಯ ವೇಳಾಪಟ್ಟಿಯನ್ನು(WPL 2023 Schedule) ಮಂಗಳವಾರ ಬಿಡುಗಡೆ ಮಾಡಿದೆ.
ಮೊದಲ ಆವೃತ್ತಿಯ ಮಹಿಳೆಯರ ಪ್ರಿಮಿಯರ್ ಲೀಗ್ ಟೂರ್ನಿ ಮಾರ್ಚ್ 4 ರಂದು ಆರಂಭಗೊಳ್ಳಲಿದೆ. ಎಲ್ಲ ಪಂದ್ಯಗಳು ಮುುಂಬೈನಲ್ಲಿ ನಡೆಯಲಿದೆ. ಮುಂಬೈಯ ಡಿವೈ ಪಾಟೀಲ್ ಹಾಗೂ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ ಎಂದು ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಟೂರ್ನಿಯ ಎರಡನೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಮಾರ್ಚ್ 26 ರಂದು ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದೆ.
ಇದನ್ನೂ ಓದಿ WPL Auction: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಅವಕಾಶ ಸಿಗದೆ, ಹೃದಯ ಒಡೆದು ಹೋಗಿದೆ; ಡೇನಿಯಲ್ ವ್ಯಾಟ್
4 ಡಬಲ್ ಹೆಡ್ಡರ್ ಪಂದ್ಯ
ಟೂರ್ನಿಯಲ್ಲಿ ಒಟ್ಟು 4 ಡಬಲ್ ಹೆಡ್ಡರ್ ಪಂದ್ಯ ಆಯೋಜಿಸಲಾಗಿದೆ. ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಡಬಲ್ ಹೆಡ್ಡರ್ನಲ್ಲಿ ಆಡಲಿದೆ. ಫೈನಲ್ ಪಂದ್ಯ ಸೇರಿ ಒಟ್ಟು 22 ಪಂದ್ಯಗಳು ನಡೆಯಲಿದೆ. ಚೊಚ್ಚಲ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಹೋರಾಟ ನಡೆಸಲಿದೆ. ಡಬಲ್ ಹೆಡ್ಡರ್ ಪಂದ್ಯಗಳು ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಇನ್ನುಳಿದ ಪಂದ್ಯಗಳು ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.