ಮುಂಬಯಿ: ಲೇಡಿ ಸೆಹವಾಗ್ ಖ್ಯಾತಿಯ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮಾ(84) ಮತ್ತು ನಾಯಕಿ ಮೆಗ್ ಲ್ಯಾನಿಂಗ್(72) ಅವರ ಸ್ಫೋಟಕ ಬ್ಯಾಟಿಂಗ್ ಸಾಹಸದಿಂದ ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 223 ರನ್ ರಾಶಿ ಹಾಕಿದೆ.
ಮುಂಬಯಿಯ ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ನ ಭಾನುವಾರದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಪೇರಿಸಿ ಸವಾಲೊಡ್ಡಿದೆ. ಆರ್ಸಿಬಿ ಗೆಲುವಿಗೆ 224 ರನ್ ಬಾರಿಸಬೇಕಿದೆ.
ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಶಫಾಲಿ ವರ್ಮಾ(Shafali Verma) ಮತ್ತು ಮೆಗ್ ಲ್ಯಾನಿಂಗ್(Meg Lanning) ಆರ್ಸಿಬಿ ಬೌಲರ್ಗಳ ಮೇಲೆ ಸವಾರಿ ನಡೆಸಿದರು. ಪ್ರತಿ ಓವರ್ನಲ್ಲಿಯೂ ಸಿಕ್ಸರ್ ಬೌಂಡರಿ ಬಾರಿಸಿ ಕಾಡಿದರು. ಓವರ್ಗೆ 10ರ ಸರಾಸರಿಯಲ್ಲಿ ರನ್ ರಾಶಿ ಹಾಕಿದರು.
ಜಿದ್ದಿಗೆ ಬಿದ್ದವರಂತೆ ಆಡಿದ ಉಭಯ ಆಟಗಾರ್ತಿಯರು ಅರ್ಧಶತಕ ಬಾರಿಸಿ ಮಿಂಚಿದರು. ಆದರೆ 72 ರನ್ ಗಳಿಸಿದ ವೇಳೆ ಮೆಗ್ ಲ್ಯಾನಿಂಗ್ ಅವರು ಹೀತರ್ ನೈಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅವರು 43 ಎಸೆತ ಎದುರಿಸಿ 13 ಬೌಂಡರಿ ಬಾರಿಸಿದರು. ಈ ವಿಕೆಟ್ ಪತನದ ಬೆನ್ನಲೇ ಶಫಾಲಿ ವರ್ಮಾ ಕೂಡ ವಿಕೆಟ್ ಕೈಚೆಲ್ಲಿದರು. ಈ ಎರಡೂ ವಿಕೆಟ್ ಕೂಡ ಹೀತರ್ ನೈಟ್ ಪಾಲಾಯಿತು. ಶಫಾಲಿ ಮತ್ತು ಲ್ಯಾನಿಂಗ್ ಮೊದಲ ವಿಕೆಟ್ಗೆ 162 ರನ್ ಜತೆಯಾಟ ನಡೆಸಿದರು.
ಸ್ಫೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ 45 ಎಸೆತ ಎದುರಿಸಿ 10 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 84 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಜೆಮಿಮಾ ರೋಡ್ರಿಗಸ್(22*), ಮರಿಜಾಯನ್ ಕಾಪ್(39*) ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಮರಿಜಾಯನ್ ಕಾಪ್ 17 ಎಸೆತದಲ್ಲಿ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅಜೇಯ 39 ರನ್ ಬಾರಿಸಿದರು. ಆರ್ಸಿಬಿ ಪರ ಹೀತರ್ ನೈಟ್ 2 ವಿಕೆಟ್ ಕಿತ್ತರು.
ಇದನ್ನೂ ಓದಿ WPL 2023: ಗುಜರಾತ್ ಜೈಂಟ್ಸ್ಗೆ ಆಘಾತ; ಟೂರ್ನಿಯಿಂದ ಹೊರಬಿದ್ದ ತಂಡದ ನಾಯಕಿ!
ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ2 ವಿಕೆಟ್ಗೆ 223 (ಶಫಾಲಿ ವರ್ಮಾ 84, ಮೆಗ್ ಲ್ಯಾನಿಂಗ್ 72, ಮರಿಜಾಯನ್ ಅಜೇಯ 39, ಜೆಮಿಮಾ ರೋಡ್ರಿಗಸ್ ಅಜೇಯ 22, ಕಾಪ್ ಹೀತರ್ ನೈಟ್ 40ಕ್ಕೆ 2