ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(WPL 2023) ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವಲ್ಲಿ ಯಶಸ್ಸು ಕಂಡಿಲ್ಲ. ಆಡಿದ 4 ಪಂದ್ಯದಲ್ಲಿಯೂ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ತಂಡದ ಸೋಲಿಗೆ ನೆಟ್ಟಿಗರು ಸೇರಿ ತಂಡದ ಅಭಿಮಾನಿಗಳು ಕೂಡ ನಾಯಕಿ ಸ್ಮೃತಿ ಮಂಧಾನಾ(smriti mandhana) ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಆರ್ಸಿಬಿ ತಂಡ ವಿಶ್ವ ದರ್ಜೆಯ ಶ್ರೇಷ್ಠ ಆಟಗಾರ್ತಿಯರಿಂದಲೇ ಕೂಡಿದೆ. ಆದರೆ ಅವರು ನೀಡುತ್ತಿರುವ ಪ್ರದರ್ಶನ ಮಾತ್ರ ಅನ್ಕ್ಯಾಪ್ಡ್ ಆಟಗಾರ್ತಿಯರಿಗಿಂತಲೂ ಕಳಪೆಯಾಗಿದೆ. ತಂಡದ ಸತತ ಸೋಲಿನಿಂದ ಕಂಗೆಟ್ಟ ಆರ್ಸಿಬಿಯ ಕೆಲ ಅಭಿಮಾನಿಗಳು ನಾಯಕಿ ಸ್ಮೃತಿ ಮಂಧಾನಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಡಬ್ಲ್ಯೂಪಿಎಲ್ನಲ್ಲಿ ಅತಿ ದುಬಾರಿ ಆಟಗಾರ್ತಿಯಾಗಿ ಗುರುತಿಸಿಕೊಂಡ ಮಂಧಾನಾಗೆ ನೀಡಿದ ಹಣ ಸಂಪೂರ್ಣ ವ್ಯರ್ಥವಾಗಿದೆ. ಅವರು ನಾಯಕತ್ವ ಜತೆಗೆ ಬ್ಯಾಟಿಂಗ್ನಲ್ಲೂ ಕಳಪೆ ಪ್ರದರ್ಶನ ತೋರಿದ್ದಾರೆ. ಇವರಿಗೆ ನೀಡಿದ ಹಣದಲ್ಲಿ ತಂಡಕ್ಕೆ ಅಂಡರ್-19 ವಿಶ್ವ ಕಪ್ ಆಡಿದ ನಾಲ್ಕು ಆಟಗಾರ್ತಿಯರನ್ನು ಖರೀದಿಸಬಹುದಾಗಿತ್ತು ಎಂದು ನೆಟ್ಟಿಗರೊಬ್ಬರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸ್ಮೃತಿ ಮಂಧಾನಾ ತುಂಬಾ ಕೆಟ್ಟ ನಾಯಕಿ. ಅವರ ನಿರ್ಧಾರಗಳು ಕಳಪೆಯಾಗಿವೆ. ಅವರಿಗೆ ನಾಯಕತ್ವದ ಯಾವುದೇ ಅರ್ಹತೆಗಳಿಲ್ಲ. ಯಾವ ಆಟಗಾರ್ತಿಯರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎನ್ನುವ ತಿಳುವಳಿಕೆಯೇ ಇಲ್ಲ. ಅವರಿಗೆ ನೀಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ” ಎಂದು ಮತ್ತೊಬ್ಬ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.