ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(WPL 2023) ಮುಂಬೈ ಇಂಡಿಯನ್ಸ್(Mumbai Indians) ತಂಡದ ಅಜೇಯ ಗೆಲುವಿನ ಆಟಕ್ಕೆ ಬ್ರೇಕ್ ಬಿದ್ದಿದೆ. ಯುಪಿ ವಾರಿಯರ್ಸ್(UP Warriorz) ವಿರುದ್ಧ 5 ವಿಕೆಟ್ ಸೋಲಿಗೆ ತುತ್ತಾಗಿದೆ. ಮೊದಲ ಮುಖಾಮುಖಿಯಲ್ಲಿ 8 ವಿಕೆಟ್ ಸೋಲು ಕಂಡಿದ್ದ ಯುಪಿ ತಂಡ ಈ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡಿತು. ಜತೆಗೆ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಮೂರನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡು ಎಲಿಮಿನೇಟರ್ ಆಸೆಯನ್ನು ಜೀವಂತವಿರಿಸಿದೆ.
ಡಿ.ವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶನಿವಾರದ ಡಬಲ್ ಹೆಡ್ಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ, ಐಸ್ಸಿ ವೋಂಗ್ ಅವರ ಅಂತಿಮ ಹಂತದ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು. ಜವಾಬಿತ್ತ ಯುಪಿ ವಾರಿಯರ್ಸ್ ಆರಂಭಿಕ ಆಘಾತದ ಹೊರತಾಗಿಯೂ 19.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ್ ಪೇರಿಸಿ ಜಯಭೇರಿ ಬಾರಿಸಿತು. ಮುಂಬೈಗೆ ಆಡಿದ 6ನೇ ಪಂದ್ಯದಲ್ಲಿ ಎದುರಾದ ಮೊದಲ ಸೋಲು ಇದಾಗಿದೆ. ಈ ಮೊದಲು ಆಡಿದ ಐದೂ ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಅಜೇಯವಾಗಿ ಗುರುತಿಸಿಕೊಂಡಿತ್ತು. ಇದೀಗ ಈ ಪಟ್ಟ ಕಳೆದುಕೊಂಡಿದೆ.
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್ ಕೂಡ ಮುಂಬೈ ತಂಡದಂತೆ ಆರಂಭಿಕ ಆಘಾತ ಕಂಡಿತು. ನಾಯಕಿ ಅಲಿಸ್ಸಾ ಮತ್ತು ದೇವಿಕಾ ವೈದ್ಯ ವಿಕೆಟ್ ಬೇಗನೆ ಪತನಗೊಂಡಿತು. ಉಭಯ ಆಟಗಾರ್ತಿಯರ ವಿಕೆಟ್ ಪತನದ ಬೆನ್ನಲ್ಲೇ ಸ್ಫೋಟಕ ಬ್ಯಾಟರ್ ಕಿರಣ್ ನವಗಿರೆ ಕೂಡ 12 ರನ್ಗೆ ಆಟ ಮುಗಿಸಿದರು. ತಂಡದ ಮೊತ್ತ 27 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಆಸ್ಟ್ರೇಲಿಯಾದ ಬ್ಯಾಟರ್ಗಳಾದ ತಹ್ಲಿಯಾ ಮೆಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ತಂಡಕ್ಕೆ ಆಸರೆಯಾಗಿ ಗೆಲುವಿನ ವಿಶ್ವಾಸ ಮೂಡಿಸಿದರು. ಉಭಯ ಆಟಗಾರ್ತಿಯರು ಮುಂಬೈ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಾಲ್ಕನೇ ವಿಕೆಟ್ಗೆ 44 ರನ್ ಜತೆಯಾಟ ನಡೆಸಿದರು. ತಹ್ಲಿಯಾ ಮೆಗ್ರಾತ್ ಅವರು 38 ರನ್ ಗಳಿಸಿ ಅಮೇಲಿಯಾ ಕೆರ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ WPL 2023 : ಗುಜರಾತ್ ತಂಡಕ್ಕೆ 11 ರನ್ ವಿಜಯ, ಬ್ಯಾಟಿಂಗ್ ಬೌಲಿಂಗ್ನಲ್ಲಿ ವೈಫಲ್ಯ ಎದುರಿಸಿದ ಡೆಲ್ಲಿ
ತಹ್ಲಿಯಾ ಮೆಗ್ರಾತ್ ವಿಕೆಟ್ ಪತನದ ಬಳಿಕ ಬಿರುಸಿನ ಆಟಕ್ಕೆ ಒತ್ತು ಕೊಟ್ಟ ಗ್ರೇಸ್ ಹ್ಯಾರಿಸ್ ಬೌಂಡರಿಗಳ ಮೂಲಕ ಮುಂಬೈ ಬೌಲರ್ಗಳನ್ನು ಕಾಡಲಾರಂಭಿಸಿದರು. ಅಮೇಲಿಯಾ ಕೆರ್ ಓವರಿಗೆ ಸತತ 2 ಬೌಂಡರಿ ಬಾರಿಸಿ ಮುಂದಿನ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. 28 ಎಸೆತ ಎದುರಿಸಿ 39 ರನ್ ಬಾರಿಸಿದರು. ಅಂತಿಮವಾಗಿ ದೀಪ್ತಿ ಶರ್ಮಾ(13*) ಮತ್ತು ಸೋಫಿ ಎಕ್ಲೆಸ್ಟೋನ್(16*) ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 127 ರನ್ಗೆ ಆಲೌಟ್ (ಹೇಲಿ ಮ್ಯಾಥ್ಯೂಸ್ 35, ಹರ್ಮನ್ಪ್ರೀತ್ ಕೌರ್ 25, ಐಸ್ಸಿ ವೋಂಗ್ 32, ಸೋಫಿ ಎಕ್ಲೆಸ್ಟೋನ್ 15ಕ್ಕೆ 3, ರಾಜೇಶ್ವರಿ ಗಾಯಕ್ವಾಡ್ 16ಕ್ಕೆ 2, ದೀಪ್ತಿ ಶರ್ಮಾ 35ಕ್ಕೆ 2. ಯುಪಿ ವಾರಿಯರ್ಸ್: 19.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129(ಗ್ರೇಸ್ ಹ್ಯಾರಿಸ್ 39, ತಹ್ಲಿಯಾ ಮೆಗ್ರಾತ್ 38, ಅಮೇಲಿಯಾ ಕೆರ್ 22ಕ್ಕೆ 2).