ಬೆಂಗಳೂರು: ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್(Mumbai Indians) ನಡುವಣ ಡಬ್ಲ್ಯುಪಿಎಲ್(WPL 2024) ಪಂದ್ಯದಲ್ಲಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಗಳನ್ನು ವಂಚಿಸಿ ಮೈದಾನಕ್ಕೆ ನುಗ್ಗಿದ್ದಾನೆ. ಈ ವೇಳೆ ಯಪಿ ವಾರಿಯರ್ಸ್(UP Warriorz) ತಂಡದ ನಾಯಕಿ ಅಲಿಸ್ಸಾ ಹೀಲಿ(Alyssa Healy) ತಮ್ಮ ಭುಜಬಲದ ಪ್ರರಾಕ್ರಮದಿಂದ ಆತನ ಹೆಡೆಮುರಿ ಕಟ್ಟಿದರು. ಈ ಘಟನೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹೀಲಿ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮುಂಬೈ ತಂಡದ ಬ್ಯಾಟಿಂಗ್ ಇನಿಂಗ್ಸ್ನ ಅಂತಿಮ ಓವರ್ನ 5ನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಅಂಜಲಿ ಸೆರ್ವಾನಿ ಎಸೆದ ಈ ಓವರ್ನ 5ನೇ ಎಸೆತದಲ್ಲಿ ಮುಂಬೈ ತಂಡದ ಬ್ಯಾಟರ್ ಎಸ್. ಸಂಜನಾ ವಿಕೆಟ್ ಕಳೆದುಕೊಂಡರು. ಈ ವೇಳೆ ಪ್ರೇಕ್ಷಕರ ಸ್ಯಾಂಡ್ನಲ್ಲಿದ್ದ ಅಭಿಮಾನಿಯೊಬ್ಬ ಆರ್ಸಿಬಿಯ ಜೆರ್ಸಿ ಹಿಡಿದುಕೊಂಡು ಬಿಗಿ ಭದ್ರತೆಯನ್ನು ಉಲ್ಲಂಘಿಸಿ ಏಕಾಏಕಿಯಾಗಿ ಮೈದಾನದತ್ತ ಓಡಿ ಬಂದಿದ್ದಾನೆ. ಪಿಚ್ ಕಡೆ ಓಡಿ ಬಂದ ಆತನನ್ನು ಹೀಲಿ ಏಕಾಂಗಿಯಾಗಿ ಹಿಡಿದು ಭುಜದ ಮೇಲೆ ಎತ್ತಿಕೊಂಡು ಸಾಗಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಹೀಲಿಯ ಸಾಹಸ ಕಂಡು ಕೆಲ ನೆಟ್ಟಿಗರು ಇದು ನಿಜಕ್ಕೂ ಸೂಪರ್ ಟ್ಯಾಕಲ್ ಎಂದು ವರ್ಣಿಸಿದ್ದಾರೆ. ಹೀಲಿ ಈ ಅಭಿಮಾನಿಯನ್ನು ಹಿಡಿದು ನಿಲ್ಲಿಸಿದ ಫೋಟೊಗಳು ವೈರಲ್ ಆಗಿದೆ.
ಇದನ್ನೂ ಓದಿ WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?
A tough tackle this from @ahealy77 as a pitch invader briefly halts play at the M Chinnaswamy stadium during the #WPL match between #MI & #UPWarriorz
— Manuja (@manujaveerappa) February 28, 2024
📸 @AseefToi pic.twitter.com/vYtxYH9cF5
ಗೆಲುವಿನ ಖಾತೆ ತೆರೆದ ಯುಪಿ
ಸತತ 2 ಸೋಲಿನಿಂದ ಕಂಗೆಟ್ಟಿದ್ದ ಯುಪಿ ವಾರಿರ್ಸ್ ತಂಡ ಬುಧವಾರ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವು ಸಾಧಿಸಿ ಗೆಲುವಿನ ಖಾತೆ ತೆರೆಯಿತು. ಈ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್(Mumbai Indians vs UP Warriorz) ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 161 ರನ್ ಬಾರಿಸಿತು. ಜವಾಬಿತ್ತ ಯುಪಿ ವಾರಿಯರ್ಸ್16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ನಾಯಕಿ ಅಲಿಸ್ಸಾ ಹೀಲಿ ಮತ್ತು ಹಾರ್ಡ್ ಹಿಟ್ಟರ್ ಕಿರಣ್ ನವಗಿರೆ ಉತ್ತಮ ಜತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 94 ರನ್ಗಳನ್ನು ರಾಶಿ ಹಾಕಿತು. 6 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ ಕಿರಣ್ ನವಗಿರೆ 57 ರನ್ ಗಳಿಸಿ ಅಮೆಲಿಯಾ ಕೆರ್ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪತನಗೊಂಡು 3 ರನ್ ಒಟ್ಟುಗೂಡುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್ ಕೂಡ ಉದುರಿತು. ಅವರ ಗಳಿಕೆ 33. ಉಭಯ ಆಟಗಾರ್ತಿಯರ ವಿಕೆಟ್ ಕಳೆದುಕೊಂಡ ಬಳಿಕ ಆಡಲಿಳಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮ(ಅಜೇಯ 27) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಯುಪಿ ವಾರಿರ್ಸ್ ತಂಡ ಗೆಲುವು ಕಂಡ ಕಾರಣ ಅಂಕಪಟ್ಟಿಯಲ್ಲಿ 2 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.